ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪಿಸಿ: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ತಾಯಿ ಶಿಶು ಮರಣ ಪ್ರಮಾಣ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಕಚೇರಿ ಸಭಾಂಗಣದಲ್ಲಿ ತಾಯಿ ಮತ್ತು ಮರಣ ಪ್ರಮಾಣ ನಿಯಂತ್ರಣ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯದ ಸರಾಸರಿಗೆ ಹೋಲಿಸಿದಾಗ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಇದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುಷ್ಠಾನದಲ್ಲಿ ಉಡುಪಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಶಿಶು ಮರಣವು 1,000ಕ್ಕೆ 2.9 ಇದ್ದು, ರಾಜ್ಯದಲ್ಲಿ ಸರಾಸರಿ 25 ಹಾಗೂ ರಾಷ್ಟ್ರದಲ್ಲಿ ಸರಾಸರಿ 29 ಇದೆ. ನೆರೆಯ ಕೇರಳ ರಾಜ್ಯದಲ್ಲಿ 10 ಇದೆ. ತಾಯಿ ಮರಣದ ಸಂಖ್ಯೆಯು ಜಿಲ್ಲೆಯಲ್ಲಿ 1 ಲಕ್ಷಕ್ಕೆ 85 ಇದ್ದರೆ, ರಾಜ್ಯದಲ್ಲಿ ಸರಾಸರಿ 108, ದೇಶದಲ್ಲಿ 134 ಇದೆ. ನೆರೆ ರಾಜ್ಯ ಕೇರಳದಲ್ಲಿ 100 ಇದೆ ಎಂದು ಜಿಲ್ಲಾಧಿಕಾರಿ ಅಂಕಿ ಅಂಶಗಳ ವಿವರ ನೀಡಿದರು.

ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಹೆರಿಗೆಗಿಂತ ಮೊದಲು ಹಾಗೂ ನಂತರದ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ಸಿಕ್ಕರೆ ತಾಯಿ ಮತ್ತು ಶಿಶು ಮರಣದ ಸಂಖ್ಯೆ ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ತಪ್ಪದೆ ತಾಯಿ ಕಾರ್ಡ್‌ಗಳನ್ನು ವಿತರಿಸಬೇಕು ಹಾಗೂ ಅವರ ಆರೋಗ್ಯದ ಕುರಿತು ಕಾಳಜಿ ವಹಿಸುವುದರ ಜತೆಗೆ ಸೂಕ್ತ ಸಲಹೆಗಳನ್ನು ನೀಡಿ, ಪೌಷ್ಟಿಕ ಆಹಾರ ಒದಗಿಸಬೇಕು ಎಂದರು.

ರಕ್ತ ಹೀನತೆ, ರಕ್ತಸ್ರಾವ, ತಾಯಿ ಮರಣ ಪ್ರಮಾಣಕ್ಕೆ ಪ್ರಮುಖ ಅಂಶವಾಗಿದ್ದು ಆರೋಗ್ಯ ಇಲಾಖೆ ಹೆಚ್ಚು ಒತ್ತು ನೀಡಬೇಕು. ಗರ್ಭಿಣಿಯರು ಚಿಕಿತ್ಸೆಗೆ ಬಂದಾಗ ಇತರೆ ಕಾಯಿಲೆಗಳ ಬಗ್ಗೆ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 10 ತಾಯಂದಿರು ಮರಣ ಹೊಂದಿದ್ದು, 30 ಶಿಶುಗಳ ಸಾವನ್ನಪ್ಪಿವೆ. 6 ಪ್ರಕರಣಗಳಲ್ಲಿ ಮರಣ ಸಂಭವಿಸುವಂತಹ ಸಾಧ್ಯತೆಗಳಿರುವ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಉಳಿಸಲಾಗಿದೆ ಎಂದರು.

ತಾಯಿ ಶಿಶು ಮರಣ ಸಂಭವಿಸಿದಾಗ ಮರಣೋತ್ತರ ಪರೀಕ್ಷೆ ಕಡ್ಡಾಯವಾಗಿ ನಡೆಯಬೇಕು. ಹೊರ ಜಿಲ್ಲೆಯಿಂದ ಜಿಲ್ಲೆಗೆ ಚಿಕಿತ್ಸೆಗೆ ಬಂದು ಮರಣ ಹೊಂದಿದರೆ ಜಿಲ್ಲಾ ಮಟ್ಟದ ಸಮಿತಿಯು ಪತ್ರ ಬರೆದು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎಂ.ಜಿ. ರಾಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು