ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ವಾಹನಗಳಲ್ಲಿ 1098 ಫಲಕ ಕಡ್ಡಾಯ

ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ
Last Updated 25 ಫೆಬ್ರುವರಿ 2021, 13:58 IST
ಅಕ್ಷರ ಗಾತ್ರ

ಉಡುಪಿ: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಖಾಸಗಿ ಶಾಲಾ ಬಸ್‌ಗಳಲ್ಲಿ ಮಕ್ಕಳಿಗೆ ಸ್ಪಷ್ಟವಾಗಿ ಕಾಣುವಂತೆ ಚೈಲ್ಡ್‌ಲೈನ್‌ 1098 ಸಹಾಯವಾಣಿ ಮಾಹಿತಿ ಪ್ರದರ್ಶಿಸಬೇಕು. ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಈ ಬಗ್ಗೆ ಸೂಚನೆ ನೀಡುಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಗೆ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಬಸ್‌ಗಳಲ್ಲಿ ಚೈಲ್ಡ್‌ಲೈನ್‌ 1098 ಸಹಾಯವಾಣಿ ಸಂಖ್ಯೆ ಅಳವಡಿಕೆಯ ಜತೆಗೆ, ಸಹಾಯವಾಣಿಯಿಂದ ಮಕ್ಕಳಿಗೆ ದೊರೆಯುವ ನೆರವು ಕುರಿತು ಮಾಹಿತಿ ನೀಡಬೇಕು.

ಶಾಲಾ ವಾಹನಗಳಲ್ಲಿ ಮಕ್ಕಳು ದೂರು ನೀಡಲು ದೂರು ಪೆಟ್ಟಿಗೆಯನ್ನು ಅಳವಡಿಸಬೇಕು. ಮಕ್ಕಳ ಸಂರಕ್ಷಣೆ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಸಭೆಗಳನ್ನು ಮೂರು ತಿಂಗಳಿಗೊಮ್ಮೆ ನಡೆಸಿ, ಸಭೆಯಲ್ಲಿ ಸಲ್ಲಿಕೆಯಾಗುವ ದೂರುಗಳನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಆಯುವ ಮಕ್ಕಳ ರಕ್ಷಣಾ ಕಾರ್ಯಾಚರಣಾ ಕಾರ್ಯ ನಿರಂತರವಾಗಿ ನಡೆಸಬೇಕು. ಬಂದರಿನ ಗೇಟಿನಲ್ಲಿ ಮಕ್ಕಳು ಒಳ ಪ್ರವೇಶಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಂದರು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆಯಾಗಬೇಕು, ಆಪ್ತ ಸಮಾಲೋಚಕರು ಇರಬೇಕು. ಮಕ್ಕಳ ರಕ್ಷಣಾ ಕಾರ್ಯಕ್ರಮ ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್. ಶೇಷಪ್ಪ, ಕಾರ್ಮಿಕ ಅಧಿಕಾರಿ ಕುಮಾರ್, ಕೋಟ ಠಾಣೆಯ ಎಎಸ್‌ಐ ಮುಕ್ತಾ, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT