ಶನಿವಾರ, ಆಗಸ್ಟ್ 24, 2019
27 °C
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮಕ್ಕೆ ಎಎಸ್‌ಪಿ ಕುಮಾರಚಂದ್ರ ಚಾಲನೆ

ಮಕ್ಕಳಿಗೆ ಕಾನೂನು ಜ್ಞಾನದ ಅರಿವು ಅಗತ್ಯ

Published:
Updated:
Prajavani

ಉಡುಪಿ: ಮಕ್ಕಳಲ್ಲಿ ಕಾನೂನು ಸುವ್ಯವಸ್ಥೆಯ ಅರಿವು ಮೂಡಿಸುವುದೇ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಮುಖ್ಯ ಉದ್ಧೇಶ ಎಂದು ಎಎಸ್‌ಪಿ ಕುಮಾರಚಂದ್ರ ತಿಳಿಸಿದರು.

ಶನಿವಾರ ಮಣಿಪಾಲದ ಪ್ರಗತಿ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಕಾನೂನಿನ ಜ್ಞಾನ ಸಿಕ್ಕರೆ, ಚಿಕ್ಕವಯಸ್ಸಿನಲ್ಲಿಯೇ ಪೊಲೀಸ್ ವೃತ್ತಿಯ ಅರಿವು ಮೂಡುತ್ತದೆ. ನಾಗರಿಕರ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡುತ್ತದೆ. ಇದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದರು.

ರಾಜ್ಯದಲ್ಲಿ ಈಗಾಗಲೇ 300 ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾನೂನು ಬದ್ಧ ಹಾಗೂ ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದೆ ಸಮಾಜದ ರಕ್ಷಣೆಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳ ಸಹಕಾರ ಇಲಾಖೆಗೆ ಅಗತ್ಯವಿದೆ ಎಂದರು.

ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ‘ಸಮಸ್ಯೆಗಳನ್ನು ಎದುರಿಸುವ ಛಾತಿ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಚಾಕಚಕ್ಯತೆಯನ್ನು ಮಕ್ಕಳಲ್ಲಿ ತುಂಬುವುದು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.

ಮಕ್ಕಳನ್ನು ಮೌಲ್ಯಯುತರನ್ನಾಗಿಸಿ, ಸದೃಢ ಪ್ರಜೆಯನ್ನಾಗಿಸುವ ಧ್ಯೇಯವನ್ನು ಕಾರ್ಯಕ್ರಮ ಹೊಂದಿದೆ. ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳದ ಕಾರ್ಯಕ್ರಮ ಹಾಗೂ ಪರಿಸರಕ್ಕೆ ಪೂರಕವಾದ ಕಾರ್ಯಗಳಲ್ಲಿ  ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಎಚ್.ನಾರಾಯಣರಾವ್ ಮಾತನಾಡಿ, 8ನೇ ತರಗತಿಯ ಮಕ್ಕಳು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದಡಿ 2 ವರ್ಷ ತರಬೇತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ರಾಜ್ಯ ಮತ್ತು ಹೊರರಾಜ್ಯದಲ್ಲಿ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗುವುದು. ಪೊಲೀಸ್ ಠಾಣೆಗಳಿಗೆ ಕರೆದೊಯ್ದು ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಕೊಡಿಸಲಾಗುವುದು. ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಿಆರ್‌ಸಿ ಉಮಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಿತಿಕ ಸ್ವಾಗತಿಸಿದರು. ಮೋಹಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಆಶಾರಾಣಿ ವಂದಿಸಿದರು. ಶಾಲೆಯ ಮುಂಭಾಗ ಗಿಡ ನೆಡಲಾಯಿತು.

Post Comments (+)