ಮರಳು ನೀತಿ ಸರಳೀಕರಣಗೊಳಿಸಿ: ಸಿಎಂಗೆ ಐದು ಕ್ಷೇತ್ರಗಳ ಶಾಸಕರ ಮನವಿ

7

ಮರಳು ನೀತಿ ಸರಳೀಕರಣಗೊಳಿಸಿ: ಸಿಎಂಗೆ ಐದು ಕ್ಷೇತ್ರಗಳ ಶಾಸಕರ ಮನವಿ

Published:
Updated:
Deccan Herald

ಉಡುಪಿ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೇಡಿಕೆಗಳನ್ನು ಸಲ್ಲಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ‘ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರವಾಗಿದ್ದು, ಜನಸಾಮಾನ್ಯರಿಗೆ ಮರಳು ಕೈಗೆಟುಕದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಮರಳು ಹಂಚಿಕೆ ನಿಯಮಗಳನ್ನು ಸರಳೀಕರಣಗೊಳಿಸಬೇಕು. ಎಲ್ಲರಿಗೂ ಮರಳು ಸಿಗಲು ವ್ಯವಸ್ಥೆ ಮಾಡಬೇಕು. ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುತ್ತಿದ್ದವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ನಡೆಸಿ ಕಾನೂನುಗಳನ್ನು ಸರಳೀಕರಣಗೊಳಿಸಿ ಅಕ್ರಮ ಮರಳುಗಾರಿಕೆಯನ್ನು ತಡೆಯುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಾಜಿಕ ಪರಿಶೀಲನೆ ಹೆಸರಿನಲ್ಲಿ ಕಾಮಗಾರಿಗಳು ವಿಳಂಬವಾಗುತ್ತಿದೆ. ‍‍ಪರಿಣಾಮ ಗ್ರಾಮ ಪಂಚಾಯತ್‍ಗಳು ಉದ್ಯೋಗ ಖಾತ್ರಿಯಡಿ ಕಾಮಗಾರಿಗಳನ್ನು ಮಾಡಲು ಹಿಂದೇಟು ಹಾಕುತ್ತಿವೆ. ಈ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಸರಳೀಕರಣಗೊಳಿಸಲು ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

‌ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಅನಿಲಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್ ಕನೆಕ್ಷನ್ ಮಂಜೂರಾಗಿದ್ದರೂ, ಸಿಲಿಂಡರ್ ಸಿಕ್ಕಿಲ್ಲ. ಪಡಿತರ ಕಾರ್ಡ್‍ನಲ್ಲಿ ಗ್ಯಾಸ್ ಕನೆಕ್ಷನ್ ಪಡೆಯಲಾಗಿದೆ ಎಂದು ನಮೂದಿಸಲಾಗಿದೆ. ಇದರಿಂದ ಫಲಾನುಭವಿಗಳಿಗೆ ಸೀಮೆಎಣ್ಣೆಯೂ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯದವರಿಗೆ ತಕ್ಷಣ ಸೀಮೆಎಣ್ಣೆ ವಿತರಿಸಲು ಕ್ರಮತೆಗೆದುಕೊಳ್ಳಲಾಗುವುದು ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !