ಕಣದಿಂದ ಹಿಂದೆ ಸರಿಯಲ್ಲ; ಗೆಲ್ಲುವ ವಿಶ್ವಾಸ ಇದೆ

ಮಂಗಳವಾರ, ಏಪ್ರಿಲ್ 23, 2019
31 °C
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತ್ತರ ಅಭ್ಯರ್ಥಿ ಅಮೃತ್ ಶೆಣೈ

ಕಣದಿಂದ ಹಿಂದೆ ಸರಿಯಲ್ಲ; ಗೆಲ್ಲುವ ವಿಶ್ವಾಸ ಇದೆ

Published:
Updated:
Prajavani

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತ್ತರ ಅಭ್ಯರ್ಥಿಯಾಗಿ ಅಮೃತ್ ಶೆಣೈ ಸ್ಪರ್ಧಿಸಿದ್ದಾರೆ. ಹಲವು ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷಕ್ಕೆ ದುಡಿದಿರುವ ಶೆಣೈ, ಈಗ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯ ವಿರುದ್ಧವೇ ಕಣಕ್ಕಿಳಿದಿರುವುದು ವಿಶೇಷ. ಮುಂದಿನ ರಾಜಕೀಯ ನಡೆಗಳ ಕುರಿತು ಅಮೃತ್ ಶೆಣೈ ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರಣ ?
ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಕಾಂಗ್ರೆಸ್‌ ಹೈಕಮಾಂಡ್ ನಿರ್ಧಾರದಿಂದ ಆಘಾತವಾಯಿತು. ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಒತ್ತಡ ಹಾಕಿದೆವು. ಆದರೆ ಪ್ರಯೋಜನವಾಗಲಿಲ್ಲ. ಈ ಬೆಳವಣಿಗೆಗಳ ಮಧ್ಯೆ ಮೋದ್ ಮಧ್ವರಾಜ್ ಅವರು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದು ಕಾರ್ಯಕರ್ತರಿಗೆ ತುಂಬಾ ನೋವುಂಟು ಮಾಡಿತು. ಎಲ್ಲರೂ ಪಕ್ಷೇತ್ತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಡ ಹಾಕಿದ್ದರಿಂದ ಅನಿವಾರ್ಯವಾಗಿ ಸ್ಪರ್ಧಿಸಿದ್ದೇನೆ.

ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಬಂಡಾಯ ಶುರುಮಾಡಿದ್ದೀರಾ?
ಖಂಡಿತ ಇಲ್ಲ, ಸ್ವಾರ್ಥದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ಕೊಟ್ಟಿದ್ದರೂ ಅವರ ಪರ ಕೆಲಸ ಮಾಡುತ್ತಿದ್ದೆ. ಆದರೆ, ಅಸ್ತಿತ್ವವೇ ಇಲ್ಲದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು ಸರಿ ಕಾಣಲಿಲ್ಲ. ಹಾಗಾಗಿ ಬಂಡಾಯ ಅನಿವಾರ್ಯವಾಯಿತು. 

ಕಾಂಗ್ರೆಸ್‌ಗೆ ಮಗ್ಗುಲ ಮುಳ್ಳಾಗಿದ್ದೀರಿ ಎನಿಸುವುದಿಲ್ಲವೇ?
ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರವಾಗುವಂತೆ ನಡೆದುಕೊಂಡಿರಲಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿರಲಿಲ್ಲ. ಆದರೆ, ಈಗ ತೆಗೆದುಕೊಂಡಿರುವ ನಿರ್ಧಾರ ತಾಂತ್ರಿಕವಾಗಿ ತಪ್ಪು. ಆದರೆ, ನೈತಿಕವಾಗಿ ಸರಿಯಾಗಿದೆ. ಮುಂದಿರುವ ವಿಚಾರಗಳು ಸ್ಪಷ್ಟವಾಗಿವೆ. ನಾನು ಸ್ಪರ್ಧೆ ಮಾಡುತ್ತಿರುವುದು ಜೆಡಿಎಸ್ ಅಭ್ಯರ್ಥಿ ವಿರುದ್ಧವೇ ಹೊರತು, ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಅಲ್ಲ.

ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೀರಾ?
ಇದುವರೆಗೂ ನೀಡಿಲ್ಲ. ರಾಜೀನಾಮೆ ಕೊಡುವುದಾ, ಬೇಡವಾ ಎಂಬ ಗೊಂದಲದಲ್ಲಿದ್ದೇನೆ. ಚುನಾವಣೆಗೂ ಮೊದಲು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇನೆ.‌

ಹೈಕಮಾಂಡ್‌ಗೆ ನಿಮ್ಮ ನಿರ್ಧಾರ ತಲುಪಿಸುವಲ್ಲಿ ವಿಫಲರಾಗಿದ್ದೀರಾ ?
ಖಂಡಿತ ಇಲ್ಲ, ತಲಪಿಸಬೇಕಾದವರಿಗೆ ತಲುಪಿಸಿದ್ದೇನೆ. ಆದರೆ, ಫಲ ಸಿಗಲಿಲ್ಲ. ಈಗ ಕೆಪಿಸಿಸಿ ಅಧ್ಯಕ್ಷರಿಂದ ಹಿಡಿದು ಹಲವರು ಕರೆ ಮಾಡುತ್ತಿದ್ದಾರೆ. ಹೈಕಮಾಂಡ್‌ಗೂ ಮನವರಿಕೆಯಾಗಲಿದೆ ಎಂಬ ವಿಶ್ವಾಸ ಇದೆ.

ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯ ಇನ್ನೂ ಇದೆಯಾ ?
ಖಂಡಿತ, ಬಂಡಾಯ ಇದೆ. ಆದರೆ, ಬಹಿರಂಗವಾಗಿ ವ್ಯಕ್ತಪಡಿಸುತ್ತಿಲ್ಲ. ಪಕ್ಷ ಬಿಟ್ಟರೆ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂಬ ಅಳಕು ಕೆಲವರಲ್ಲಿದೆ.

ಗೆಲ್ಲುವ ವಿಶ್ವಾಸ ಇದೆಯಾ?
ಖಂಡಿತ ಇದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜನ ಬುದ್ಧಿವಂತರು. ನಾನು ಮನೆಮನೆಗೆ ಕರಪತ್ರ ಹಂಚುವುದಿಲ್ಲ, ಬಹಿರಂಗ ಸಮಾವೇಶಗಳನ್ನು ಮಾಡುವುದಿಲ್ಲ. ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮತದಾರರನ್ನು ತಲುಪುತ್ತೇನೆ. 

ನಿಮಗೆ ಯಾಕೆ ಮತಹಾಕಬೇಕು?
ಶೋಭಾ ಕರಂದ್ಲಾಜೆ ಅವರು ಸಂಸದರಾಗಿ, ಪ್ರಮೋದ್ ಮಧ್ವರಾಜ್ ಅವರು ಶಾಸಕ, ಸಚಿವರಾಗಿ ಮಾಡಿದ ಕೆಲಸಗಳನ್ನು ಕ್ಷೇತ್ರದ ಜನರು ನೋಡಿದ್ದಾರೆ. ನನಗೂ ಒಂದು ಅವಕಾಶ ಕೊಟ್ಟರೆ, ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ನನ್ನೊಳಗೆ ಹೊಸತನ ಇದೆ, ಯುವ ಜನಾಂಗದ ಪ್ರತಿನಿಧಿಯಾಗಿದ್ದೇನೆ. ಮುಖ್ಯವಾಗಿ ಯಾವ ಪಕ್ಷದ ಮುಲಾಜಿನಲ್ಲೂ ಇಲ್ಲ.

ಗೆದ್ದರೆ ಮಾಡುವ ಮೊದಲ ಕೆಲಸ?
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಗಂಭೀರವಾಗಿದ್ದು, ಅದನ್ನು ನಿವಾರಿಸಲು ಶ್ರಮಿಸುತ್ತೇನೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ನಿರ್ಮಾಣ, ಸಾಫ್ಟ್‌ವೇರ್ ಪಾರ್ಕ್‌ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ. ಇದರಿಂದ ಉದ್ಯೋಗ ಸೃಷ್ಟಿಯಾಗಿ ಯುವಕರು ವಲಸೆ ಹೋಗುವುದು ತಪ್ಪಲಿದೆ. ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕಾನೂನಾತ್ಮಕ ಹೋರಾಟ ಮಾಡುವ ಚಿಂತನೆ ಇದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !