ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.27ರಂದು ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭ

ಪೂರ್ವಭಾವಿ ಸಭೆಯಲ್ಲಿ ಸ್ಥಳ ನಿಗಧಿ ಚರ್ಚೆ
Last Updated 17 ಡಿಸೆಂಬರ್ 2018, 11:29 IST
ಅಕ್ಷರ ಗಾತ್ರ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥರು ಸನ್ಯಾಸಾಶ್ರಮ ಸ್ವೀಕರಿಸಿ 80 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಡಿ.27ರಂದು ರಾಜಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವ ನಿರ್ಧಾರಕ್ಕೆ ಪೂರ್ವಭಾವಿ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.

ಸ್ಥಳ ನಿಗಧಿ ಕುರಿತು ಭಾನುವಾರ ಪೇಜಾವರ ಮಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿಗಣ್ಯರು, ಸಂಘ–ಸಂಸ್ಥೆಗಳ ಮುಖ್ಯಸ್ಥರು, ರಾಜಕೀಯ ಮುಖಂಡರು, ಶ್ರೀಕೃಷ್ಣಮಠದ ಸಿಬ್ಬಂದಿ ಭಾಗವಹಿಸಿ ಸ್ಥಳ ನಿಗಧಿ ಕುರಿತು ಚರ್ಚೆ ನಡೆಸಿದರು. ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ವಾಸುದೇವ ಭಟ್‌, ಅಭಿನಂದನಾ ಸಮಾರಂಭಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಬೇಕಾಗಿದೆ.

ಭದ್ರತೆಯ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆಗೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಬೇಕಿದೆ. ಸದ್ಯ, ಶ್ರೀಕೃಷ್ಣಮಠದ ರಾಜಾಂಗಣ, ಪಾರ್ಕಿಂಗ್ ಪ್ರದೇಶ ಹಾಗೂ ರಥಬೀದಿಯಲ್ಲಿ ಸಮಾರಂಭ ಆಯೋಜಿಸುವ ಪ್ರಸ್ತಾವಗಳಿದ್ದು, ಮೂರು ಸ್ಥಳಗಳಲ್ಲಿ ಸೂಕ್ತ ಸ್ಥಳವನ್ನು ಅಂತಿಮಗೊಳಿಸಬೇಕಿದೆ ಎಂದರು.

ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿ 80 ವರ್ಷ ತುಂಬಿದ ಸಂಭ್ರಮವನ್ನು ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, 80 ಕುಂಭಗಳ ಮೆರವಣಿಗೆ, ತುಲಾಬಾರದಂತಹ ಕಾರ್ಯಕ್ರಮಗಳ ಆಯೋಜನೆ ಸೂಕ್ತ ಎಂದು ಸಭೆಯಲ್ಲಿದ್ದ ಹಲವರು ಅಭಿಪ್ರಾಯಪಟ್ಟರು.

ರಾಷ್ಟ್ರಪತಿಗಳ ಕಾರ್ಯಕ್ರಮವಾಗಿರುವುದರಿಂದ ಶಿಷ್ಟಾಚಾರ ಪಾಲನೆ ಕಡ್ಡಾಯ. ರಾಷ್ಟ್ರಪತಿಗಳು ತೆರಳಿದ ಬಳಿಕ ಸನ್ಮಾನ, ಅಭಿನಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತ ಎಂಬ ಸಲಹೆ ಕೇಳಿಬಂತು.

ಇದೇವೇಳೆ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮವಾಗಿರುವುದರಿಂದ ಭದ್ರತೆಗೆ ಹೆಚ್ಚು ಒತ್ತು ನೀಡಬೇಕಿದೆ. ಕಾರ್ಯಕ್ರಮದ ಸ್ಥಳವನ್ನು ಅಂತಿಮಗೊಳಿಸಿ ಪೊಲೀಸ್ ಇಲಾಖೆಗೆ ತಿಳಿಸಿದರೆ, ಸ್ಥಳ ಪರಿಶೀಲನೆ ನಡೆಸಲಾಗುವುದು. ರಾಷ್ಟ್ರಪತಿ ಕಚೇರಿಯ ಸೂಚನೆಯಂತೆ ಕಾರ್ಯಕ್ರಮ ಆಯೋಜಿಸಬೇಕಿರುವುದು ಕಡ್ಡಾಯ ಎಂದು ತಿಳಿಸಿದರು.

ಅತಿಗಣ್ಯರು ಭೇಟಿ ನೀಡುತ್ತಿರುವ ಕಾರಣ ಸಾರ್ವಜನಿಕರು ಪೊಲೀಸ್ ಇಲಾಖೆ ಜತೆಗೆ ಸಹಕರಿಸಬೇಕು. ಕಾರ್ಯಕ್ರಮದಲ್ಲಿ ವೇದಿಕೆ ಮೇಲಿರುವ ಗಣ್ಯರ ಹಾಗೂ ಭಾಗವಹಿಸುವವರ ಪಟ್ಟಿಯನ್ನು ಮೊದಲೇ ಪೊಲೀಸ್ ಇಲಾಖೆಗೆ ಸಲ್ಲಿಸಬೇಕು. ಪಟ್ಟಿ ಪರಿಶೀಲಿಸಿ ಭಾಗವಹಿಸುವವರಿಗೆ ಪಾಸ್ ವಿತರಿಸಲಾಗುವುದು. ಕಾರ್ಯಕ್ರಮದ ದಿನ ಕಡ್ಡಾಯವಾಗಿ ಪಾಸ್‌ ಹೊಂದಿದ್ದವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದರು.

ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆ ಮುನ್ನ ಎಲ್ಲರೂ ಹಾಜರಿರಬೇಕು. ಕಾರಣ, ಅತಿ ಗಣ್ಯರು ನಗರದ ಪ್ರವೇಶಿಸುವ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗುವುದು. ಮುಂಚಿತ ಬಂದವರಿಗಷ್ಟೆ ಪ್ರವೇಶ. ಸಮಾರಂಭ ನಡೆಯುವ 100 ಮೀಟರ್ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ಸಾರ್ವಜನಿಕರು ಶ್ರೀಕೃಷ್ಣಮಠದ ಬಳಿ ವಾಹನಗಳನ್ನು ಪಾರ್ಕಿಂಗ್ ಮಾಡುವಂತಿಲ್ಲ ಎಂದು ನಿಯಮಗಳನ್ನು ತಿಳಿಸಿದರು.

ಇದೇವೇಳೆ ಮರಳಿ ಕಡೇಕಾರ್ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗದಿದ್ದರೆ ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಶ್ರೀಗಳ ಅಭಿಮಾನಿಗಳೆಲ್ಲ ಸೇರಿ ಮತ್ತೊಂದು ಅಭಿನಂದನಾ ಸಮಾರಂಭವನ್ನು ಆಯೋಜಿಸಿ ಸಂತಸಪಡೋಣ ಎಂದು ಸಲಹೆ ನೀಡಿದರು.

ಶ್ರೀಕೃಷ್ಣ ಮಠದ ಆಡಳಿತಾಧಿಕಾರಿ ಪ್ರಹ್ಲಾದ್ ಆಚಾರ್ಯ, ಮುಖಂಡರಾದ ಗಣೇಶ್ ರಾವ್, ರಾಘವೇಂದ್ರ ಆಚಾರ್ಯ, ಪ್ರದೀಪ್ ಕುಮಾರ್ ಕಲ್ಕುರ, ದೇವದಾಸ್ ಹೆಬ್ಬಾರ್, ವಿಲಾಸ್ ಕುಮಾರ್, ವಿ.ಜೆ.ಶೆಟ್ಟಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT