ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ದ್ವಂದ್ವ ನೀತಿ: ಅಶೋಕ್ ಕುಮಾರ್ ಕೊಡವೂರು

Last Updated 29 ಸೆಪ್ಟೆಂಬರ್ 2022, 13:22 IST
ಅಕ್ಷರ ಗಾತ್ರ

ಉಡುಪಿ: ದೇಶದಾದ್ಯಂತ ಎನ್‌ಐಎ ದಾಳಿಯಿಂದ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ಮುಖವಾಡ ಕಳಚಿ ಬೀಳುವುದರ ಜತೆಗೆ ಕರಾವಳಿಯ ಬಿಜೆಪಿಯ ಅಧಿಕಾರ ದಾಹದ ಕರಾಳ ರಾಜಕೀಯ ಮುಖವಾಡವೂ ಕಳಚಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಟೀಕಿಸಿದ್ದಾರೆ.

ರಾಷ್ಟ್ರ ವಿರೋಧಿ ಸಂಘಟನೆಗಳಿಗೆ ಪರೋಕ್ಷ ಬೆಂಬಲ ನೀಡುವ ಬಿಜೆಪಿಯ ನಡೆಯನ್ನು ಬಿಜೆಪಿ ನಾಯಕ ಯಶ್‌ಪಾಲ್ ಸುವರ್ಣ ಸಮರ್ಥಿಸುತ್ತಾರೆಯೇ ಎಂದು ಪ್ರಶ್ನಿಸಿರುವ ಅವರು, ಪಿಎಫ್‌ಐ ಸಂಘಟನೆಯನ್ನು ನಿಷೇದಿಸಿರುವ ಸರ್ಕಾರ ಎಸ್‌ಡಿಪಿಐ ನಿಷೇಧಿಸದಿರಲು ಕಾರಣ ಏನು ಎಂದು ಪ್ರಶ್ನಿಸಿದ್ದಾರೆ.

ಪಿಎಫ್ಐ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು. ಪಿಎಎಫ್‌ಐ ಸಂಘಟನೆಯ ರಾಜಕೀಯ ಗುಪ್ತ ಕಾರ್ಯಸೂಚಿ ಅನುಷ್ಠಾನದ ವಿಭಾಗವೇ ಎಸ್‌ಡಿಪಿಐ. ಆದರೆ, ಬಿಜೆಪಿಗೆ ಎಸ್‌ಡಿಪಿಐ ನಿಷೇದಿಸುವ ಧೈರ್ಯವಿಲ್ಲ. ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಸ್‌ಡಿಪಿಐ ಮಾಡಿರುವ ಉಪಕಾರದ ಋಣ ಬಿಜೆಪಿ ಮೇಲಿದೆ ಎಂದು ಟೀಕಿಸಿದ್ದಾರೆ.

ಎಸ್‌ಡಿಪಿಐ ಸಂಘಟನೆ ರಾಜಕೀಯ ವಿರೋಧಿಗಳನ್ನು ಹಣಿಯಲು ಬಳಸಿಕೊಳ್ಳುತ್ತಿರುವ ಒಂದು ಸಂಸ್ಥೆಯಾಗಿದೆ. ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಎಸ್‌ಡಿಪಿಐ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯವನ್ನೂ ಬಿಜೆಪಿ ಮಾಡಿತ್ತು.

ಈ ಮೈತ್ರಿ ಪಕ್ಷದ ಕೆಲವರ ಸಿಟ್ಟಿಗೆ ಕಾರಣವಾಗಿತ್ತು. ಹಿಂದೂ ಸಂಘಟನೆಗಳ ಮುಖಂಡರು ಒಳ ಒಪ್ಪಂದದ ಬಗ್ಗೆ ಕಿಡಿ ಕಾರಿದ್ದವು. ಕಾಂಗ್ರೆಸ್ ಎಂದಿಗೂ ದೇಶ ದ್ರೋಹಿ ಸಂಘಟನೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದುಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ ˌ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT