ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ವಿಶ್ವಾಸ ಕಳೆದುಕೊಂಡ ಬಿಜೆಪಿಗೆ ಹತಾಶ ಭಾವ: ಕಾಂಗ್ರೆಸ್‌

Last Updated 2 ಅಕ್ಟೋಬರ್ 2021, 12:40 IST
ಅಕ್ಷರ ಗಾತ್ರ

ಉಡುಪಿ: ಜನ ವಿರೋಧಿ ನೀತಿಗಳಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಬಿಜೆಪಿ ಹತಾಶ ಭಾವದಿಂದ ಕಾಂಗ್ರೆಸ್‌ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಟೀಕಿಸಿದರು.

ಶನಿವಾರ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಕಾಂಗ್ರೆಸ್‌ ನಾಯಕ ವಿನಯಕುಮಾರ್ ಸೊರಕೆ ಅವರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಮುತ್ತಿಗೆ ಹಾಕಿದರೆ ಕಾಂಗ್ರೆಸ್‌ ಕೈಕಟ್ಟಿ ಕೂರುವುದಿಲ್ಲ ಎಂದು ತಿರುಗೇಟು ನೀಡಿದರು.

ವರ್ಗಾವಣೆ ಮಾಡಿಸಲು ಬಿಜೆಪಿ ನಾಯಕರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಈಚೆಗೆ ಪೊಲೀಸ್ ಅಧಿಕಾರಿಯೊಬ್ಬರು ವಿನಯಕುಮಾರ್ ಸೊರಕೆ ಅವರ ಬಳಿ ಅಸಮಾಧಾನ ತೋಡಿಕೊಂಡಿದ್ದರು. ಈ ವಿಚಾರವನ್ನೇ ಸೊರಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದರು ಎಂದು ಸಮಜಾಯಿಷಿ ನೀಡಿದರು.

ಪೆರ್ಡೂರು ಪ್ರತಿಭಟನೆ ಕಾಂಗ್ರೆಸ್‌ ಮಾಡಿದ್ದಲ್ಲ. ಪಂಚಾಯಿತಿಯ ಅಕ್ರಮಗಳ ವಿರುದ್ಧ ಧನಿ ಎತ್ತಿದ ಮಹಿಳಾ ಪಿಡಿಒಗೆ ಅಲ್ಲಿನ ಬಿಜೆಪಿ ಮುಖಂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರ ವಿರುದ್ಧ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪಿಡಿಒ ಪ್ರಕರಣ ದಾಖಲಿಸಿದ್ದಾರೆ. ದಲಿತ ಸಂಘಟನೆಗಳು ಕೂಡ ಮಹಿಳೆಯ ಪರವಾಗಿ ನಿಂತಿವೆ. ಕಾಂಗ್ರೆಸ್ ಕೂಡ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದ್ದು, ಇದು ತಪ್ಪೇ ಎಂದು ಕೊಡವೂರು ಪ್ರಶ್ನಿಸಿದರು.

ವಿನಯ ಕುಮಾರ ಸೊರಕೆ ಎಂಎಲ್‌ಎ ಆಗಿದ್ದಾಗ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ₹1,800 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದರು. ಈಗ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಹಾಲಿ ಶಾಸಕರು ಸೌಜನ್ಯಕ್ಕಾದರೂ ಮಾಜಿ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ಇದರನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ನೀಡಿದರು.

ಹಿಂದೂಗಳ ಹೆಸರಲ್ಲಿ ಮತ ಪಡೆದ ಬಿಜೆಪಿ ದೇವಸ್ಥಾನ ನೆಲಸಮ ಮಾಡಿದಾಗಲೂ ತುಟಿ ಬಿಚ್ಚಲಿಲ್ಲ. ಬಿಜೆಪಿಯದ್ದು ಯಾವ ರೀತಿಯ ಹಿಂದುತ್ವ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಪಕ್ಷದ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಅಬಿಬ್ ಅಲಿ, ಅಣ್ಣಯ್ಯ ಶೇರಿಗಾರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಮುಖಂಡರಾದ ಹರೀಶ್ ಶೆಟ್ಟಿ ಪಾಂಗಳ, ಭಾಸ್ಕರ್ ರಾವ್ ಕಿದಿಯೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT