ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮೋ ಎಂದವರ ಬಾಯಿ ಬಂದ್‌

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಪ್ರಮೋದ್ ಮಧ್ವರಾಜ್ ಟೀಕೆ
Last Updated 14 ನವೆಂಬರ್ 2019, 12:32 IST
ಅಕ್ಷರ ಗಾತ್ರ

ಉಡುಪಿ: ‘ನಮೋ ಅಂದರೆ ನರೇಂದ್ರ ಮೋದಿ ಅಲ್ಲ; ನಮಗೆ ಮೋಸ’. ಮೋದಿ ಮೋಸದ ಬಗ್ಗೆ ನಿಧಾನವಾಗಿ ಜನರಿಗೆ ಅರಿವಾಗುತ್ತಿದೆ. ನಮೋ ಎಂದು ಕೂಗಿದವರ ಬಾಯಿ ಬಂದ್‌ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದರು.

ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ದೇಶವನ್ನು ಸಂಕಷ್ಟಕ್ಕೆ ದೂಡಿದೆ. ಅಂದು ನಮೋ ಎಂದವರ ಹೊಟ್ಟೆಗೂ ಹೊಡೆತ ಬಿದ್ದಿದೆ. ಇಷ್ಟಾದರೂ, ಬಿಜೆಪಿ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲ’ ಎಂದು ವ್ಯಂಗ್ಯವಾಡಿದರು.

ಮನಮೋಹನ್‌ ಸಿಂಗ್ ಪ್ರಧಾನಿಯಾಗಿದ್ದಾಗ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿತ್ತು. ಪ್ರಸ್ತುತ ದೇಶದ ಅಭಿವೃದ್ಧಿ ಸೂಚ್ಯಂಕ ಪಾತಾಳಕ್ಕೆ ಕುಸಿದಿದೆ. ಯುಪಿಎ ಅವಧಿಯಲ್ಲಿಶೇ 9ರಷ್ಟಿದ್ದ ಜಿಡಿಪಿ, ಈಗ ಶೇ 4ರ ಆಸುಪಾಸಿಗೆ ಬಂದಿದೆ. ಶೇ 1ರಷ್ಟು ಜಿಡಿಪಿ ಕುಸಿದರೂ ಸರ್ಕಾರದ ₹ 5 ಲಕ್ಷ ಕೋಟಿ ಆದಾಯ ಕಡಿಮೆಯಾಗುತ್ತದೆ ಎಂದು ಹೇಳಿದರು.

6 ತಿಂಗಳಿನಿಂದ ವಸತಿ ಯೋಜನೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಹಾಲಿನ ಸಬ್ಸಿಡಿ ಬಿಡುಗಡೆ ಮಾಡಿಲ್ಲ. ರಸ್ತೆ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು ಮಾತ್ರ ನಡೆಯುತ್ತಿವೆ ಎಂದರು.

ಆರ್ಥಿಕ ಹಿಂಜರಿತದಿಂದ ಉದ್ಯೋಗ ನಷ್ಟವಾಗಿದೆ.ಕರಾವಳಿಯಲ್ಲಿ ಗೋಡಂಬಿ ಕಾರ್ಖಾನೆಗಳು ಮುಚ್ಚುತ್ತಿವೆ. ಮೀನುಗಾರಿಕಾ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ದುಡಿಮೆ ಇಲ್ಲ. ಪ್ರಧಾನಿ ಮೋದಿ ಬಿಟ್ಟರೆ ದೇಶದಲ್ಲಿ ಯಾರೂ ಸಂತೋಷವಾಗಿಲ್ಲ ಎಂದು ಮಧ್ವರಾಜ್ ಟೀಕಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ‘ಶಾಸಕರನ್ನು ಅನರ್ಹಗೊಳಿಸಲು ಸಿದ್ದರಾಮಯ್ಯ ನಡೆಸಿದ ಕುತಂತ್ರ ಫಲ ನೀಡಲಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಸುಪ್ರೀಂಕೋರ್ಟ್‌ ಸ್ಪೀಕರ್‌ ಕ್ರಮವನ್ನು ಎತ್ತಿ ಹಿಡಿದಿದೆ. ಜತೆಗೆ, ಬಿಜೆಪಿಯ ಕುದುರೆ ವ್ಯಾಪಾರ, ಕುತಂತ್ರ ದೇಶದ ಜನರ ಮುಂದೆ ಬಯಲಾಗಿದೆ. ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.‌

ಮುಖಂಡ ಯು.ಆರ್‌.ಸಭಾಪತಿ ಮಾತನಾಡಿ, ಕಾಂಗ್ರೆಸ್‌ ನಾಯಕರ ತ್ಯಾಗ ಬಲಿದಾನದಿಂದ ದೇಶ ಸದೃಢವಾಗಿದೆ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೇರುವಂತೆ ಸಂಕಲ್ಪ ಮಾಡೋಣ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಮೋಹನ್‌ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT