ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರತಿಭಟನೆ | ಕಣ್ಣು ಕಿವಿ ಮುಚ್ಚಿ ಕುಳಿತ ಕೇಂದ್ರ ಸರ್ಕಾರ

Last Updated 17 ಫೆಬ್ರುವರಿ 2020, 15:04 IST
ಅಕ್ಷರ ಗಾತ್ರ

ಉಡುಪಿ: ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮೀಸಲಾತಿ ರದ್ದುಗೊಳಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಈಚೆಗೆ ಉತ್ತರಾಖಂಡ್ ಸರ್ಕಾರ ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಪರಿಣಾಮ ಮೀಸಲಾತಿ ವಿರುದ್ಧದ ತೀರ್ಪು ಬಂದಿದ್ದು, ಆತಂಕಕಾರಿ ಬೆಳವಣಿಗೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಾಗ್ದಾಳಿ ನಡೆಸಿದರು.

ಸೋಮವಾರ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಉದ್ಯೋಗ, ಬಡ್ತಿ ನೀಡಲು ಮೀಸಲಾತಿ ಪರಿಗಣಿಸುವುದು ಸಾಂವಿಧಾನಿಕ ಹಕ್ಕಲ್ಲ. ಸಂವಿಧಾನಿಕ ಕರ್ತವ್ಯವೂ ಅಲ್ಲ ಎಂದು ಉತ್ತರಾಖಂಡ್‌ ಸರ್ಕಾರ ವಾದ ಮಂಡಿಸಿತ್ತು. ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಇದರಿಂದ ಎಸ್‌ಸಿ ಎಸ್‌ಟಿ ವರ್ಗಕ್ಕೆ ಅನ್ಯಾಯವಾಗಲಿದೆ ಎಂದರು.

ಈ ಹಿಂದೆ ಆರ್‌ಎಸ್‌ಎಸ್‌ ಕೂಡ ಮೀಸಲಾತಿ ವಿರುದ್ಧ ಮಾತನಾಡಿತ್ತು. ಈಗ ಬಿಜೆಪಿ ನಡೆಯನ್ನು ಗಮನಿಸಿದರೆ ಮೀಸಲಾತಿಯನ್ನು ತೆಗೆದುಹಾಕುವ ಹುನ್ನಾರ ನಡೆಯುತ್ತಿರುವುದು ಕಾಣುತ್ತಿದೆ. ಆರ್‌ಎಸ್‌ಎಸ್‌ ಉದ್ದೇಶವನ್ನು ಈಡೇರಿಸಲು ಹೊರಟಿದಂತಿದೆ ಎಂದು ಸೊರಕೆ ಟೀಕಿಸಿದರು.

ದೇಶದಲ್ಲಿ ಹಿಂದೆಂದೂ ಕಾಣದ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಜನರ ವಿರೋಧವಿದ್ದರೂ ಎನ್‌ಆರ್‌ಸಿ ಜಾರಿ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಹೇಳಿರುವುದು ಖಂಡನೀಯ ಎಂದರು.

‌ನಿರುದ್ಯೋಗ ಹೆಚ್ಚಳ, ಜಿಡಿಪಿ ಕುಸಿತ, ತೈಲ ಬೆಲೆ ಹೆಚ್ಚಳ, ಆರ್ಥಿಕ ಕುಸಿತದಂತಹ ಗಂಭೀರ ಸಮಸ್ಯೆಗಳಿದ್ದರೂ ಸರ್ಕಾರ ಕಣ್ಣು, ಕಿವಿ ಮುಚ್ಚಿ ಕುಳಿತಿದೆ. ಧರ್ಮ, ಜಾತಿ, ಭಾಷೆ ಹೆಸರಿನಲ್ಲಿ ಗೋಡೆಗಳನ್ನು ನಿರ್ಮಾಣ ಮಾಡಿ, ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮುಖಂಡ ಎಂ.ಎ.ಗಫೂರ್ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಎಸ್‌ಸಿ ಎಸ್‌ಟಿಗಳ ಪರ ಕಾಳಜಿ ಇದ್ದರೆ ತಕ್ಷಣ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ದಲಿತರ ಹಿತ ಕಾಯಲು ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವೆರೊನಿಕಾ ಕರ್ನೆಲಿಯೊ ಮಾತನಾಡಿ, ನ್ಯೂನತೆಗಳನ್ನು ಮುಚ್ಚಿಹಾಕಲು ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌ನಂತಹ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತರಲಾಗಿದೆ. ಸಂವಿಧಾನದ ಬುಡವನ್ನು ಅಲುಗಾಡಿಸುವ ಕೆಲಸಕ್ಕೆ ಬಿಜೆಪಿ ಕೈಹಾಕಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ನರಸಿಂಹಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್‌, ಉಪೇಂದ್ರ ಮೆಂಡನ್‌, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್‌ ಶೆಟ್ಟಿ ಪಾಂಗಳ, ಗೀತಾ ವಾಗ್ಳೆ, ಪ್ರಖ್ಯಾತ್ ಶೆಟ್ಟಿ, ವಿಲಿಯಂ ಮಾರ್ಟಿಸ್‌, ಡಾ.ಸುನೀತಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT