ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹನಾ ಸಾವಿಗೆ ಬಿಜೆಪಿ ಹೊಣೆ: ನಲಪಾಡ್‌

ಉದ್ಯೋಗ ಸಿಗದೆ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಯುವತಿ ಸಹನಾ: ಯುವ ಕಾಂಗ್ರೆಸ್ ಪ್ರತಿಭಟನೆ
Last Updated 12 ಮೇ 2022, 14:17 IST
ಅಕ್ಷರ ಗಾತ್ರ

ಉಡುಪಿ: ಉದ್ಯೋಗ ಸಿಗದ ಕಾರಣಕ್ಕೆ ಮನನೊಂದು ಈಚೆಗೆ ಶಿರ್ವದಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂಬಿಎ ಪದವೀಧರೆ ಸಹನಾ ಸಾವಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್ ನಲಪಾಡ್‌ ಆರೋಪಿಸಿದರು.

ಗುರುವಾರ ಬನ್ನಂಜೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಜಿಲ್ಲಾ ಯುವ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಯುವಕರ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದೆ. ಬದುಕು ಕಟ್ಟಿಕೊಳ್ಳಬೇಕಾದ ವಯಸ್ಸಿನನಲ್ಲಿ ಯುವತಿ ಸಹನಾಳ ಭವಿಷ್ಯ ಕಮರಿಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಉದ್ಯೋಗ ಸೃಷ್ಟಿಯ ಬದಲಾಗಿ 2 ಕೋಟಿ ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ ಎಂದು ಟೀಕಿಸಿದರು.

ಮೃತ ಯುವತಿಯ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ಯುವ ಕಾಂಗ್ರೆಸ್‌ ಪ್ರತಿಭಟನೆ ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದ ನಲಪಾಡ್ ಯುವ ಕಾಂಗ್ರೆಸ್‌ನಿಂದ ಮೃತ ಯುವತಿಯ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು.

40 ಪರ್ಸೆಂಟ್ ಕಮಿಷನ್‌ ಹೊರತುಪಡಿಸಿ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ನೋವು, ಸಮಸ್ಯೆಗಳು ಕಾಣುತ್ತಿಲ್ಲ. ಕೊರೊನಾದಿಂದ 4.70 ಲಕ್ಷ ಜನರು ಮಾತ್ರ ಮೃತಪಟ್ಟಿರುವುದಾಗಿ ಸರ್ಕಾರ ಹೇಳಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ 47 ಲಕ್ಷ ಜನರು ಸಾವನ್ನಪ್ಪಿರುವುದಾಗಿ ಹೇಳುತ್ತಿದೆ. ಕೋವಿಡ್‌ನಿಂದ ಮೃತರಾದವರಿಗೆ ಪರಿಹಾರ ನೀಡಬೇಕು ಎಂಬ ಕಾರಣಕ್ಕೆ ಸಾವಿನಲ್ಲೂ ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ವಕ್ತಾರೆ ಸುರಯ್ಯ ಭಾನು ಮಾತನಾಡಿ ‘ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಬಿಜೆಪಿ ನಾಯಕರು ಶಿರ್ವದಲ್ಲಿ ಉದ್ಯೋಗ ಸಿಗದೆ ಹಿಂದೂ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ತಿರುಗಿ ನೋಡಿಲ್ಲ. ಜಟ್ಕಾ ಕಟ್‌, ಹಲಾಲ್‌ ಕಟ್‌, ಧರ್ಮಗಳ ಮಧ್ಯೆ ದ್ವೇಷ ಬಿತ್ತುವುದು ಬಿಜೆಪಿ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.

ಅಡುಗೆ ಸಿಲಿಂಡರ್ ದರ ಸಾವಿರ ದಾಟಿದ್ದರೂ ಬಡವರ ಕಣ್ಣೀರು ಒರೆಸದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸೌಹಾರ್ದ ಹಾಗೂ ಶಾಂತಿ ಕದಡುವ ಕಾರ್ಯ ಮಾಡುತ್ತಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ದೀಪಕ್ ಕೋಟ್ಯಾನ್‌ ಮಾತನಾಡಿ, ಇಂಧನ ಸಚಿವರ ಜಿಲ್ಲೆಯಲ್ಲಿಯೇ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ತವರು ಜಿಲ್ಲೆಗೆ ಸಮರ್ಪಕ ವಿದ್ಯುತ್ ನೀಡದ ಸುನಿಲ್ ಕುಮಾರ್ ಅಸಮರ್ಥ ಸಚಿವರು ಎಂದು ಟೀಕಿಸಿದರು.

‘ರಮ್ಯಾ ಕ್ಷುಲ್ಲಕ ರಾಜಕಾರಣ ಬಿಡಲಿ’

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕೆ ಮಾಡುತ್ತಿರುವ ರಮ್ಯಾ ಇಷ್ಟು ದಿನ ಎಲ್ಲಿದ್ದರು ಎಂದು ಪ್ರಶ್ನಿಸಿದ ನಲಪಾಡ್‌, ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಹಾಗೂ ರಾಜಕಾರಣದಲ್ಲಿ ಇರುವಿಕೆಯನ್ನು ತೋರಿಸುವ ಉದ್ದೇಶದಿಂದ ನಾಪತ್ತೆಯಗಿದ್ದ ರಮ್ಯಾ ಏಕಾಏಕಿ ಪ್ರತ್ಯಕ್ಷವಾಗಿದ್ದಾರೆ. ಕುರ್ಚಿಯ ಮೇಲೆ ಟವಲ್ ಹಾಕಲು ಅನವಶ್ಯಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಎಂ.ಬಿ.ಪಾಟೀಲ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ಭೇಟಿ ವಿಚಾರವಾಗಿ ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಈಚೆಗೆ ರಾಜಕಾರಣದ ಬಗ್ಗೆ ಟ್ವೀಟ್‌ ಮಾಡದ ರಮ್ಯಾ ಏಕಾಏಕಿ ಡಿ.ಕೆ.ಶಿವಕುಮಾರ್ ವಿರುದ್ಧ ಮುಗಿಬಿದ್ದಿರುವುದರ ಹಿಂದೆ ದೊಡ್ಡ ಉದ್ದೇಶ ಇರುವಂತೆ ಕಾಣುತ್ತಿದೆ. ರಮ್ಯಾ ಚೀಪ್‌ ರಾಜಕಾರಣ ಬಿಡಬೇಕು ಎಂದರು.

‘ದ್ರೋಹಿ ಯಾರೆಂದು ಜನ ನಿರ್ಧರಿಸಲಿ’

ಮೊದಲ ಬಾರಿ ಶಾಸಕರಾದರೂ ಸಚಿವ ಸ್ಥಾನ ನೀಡಿದ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋದರೆ ನನಗಿಂತ ದೊಡ್ಡ ದ್ರೋಹಿ ಯಾರೂ ಇಲ್ಲ ಎಂದು ಪ್ರಮೋದ್ ಮಧ್ವರಾಜ್ ಹಿಂದೆ ಹೇಳಿಕೆ ನೀಡಿದ್ದರು. ಈಗ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದಾರೆ. ಅವರನ್ನು ಏನೆಂದು ಕರೆಯಬೇಕು ಎಂದು ಜನರೇ ನಿರ್ಧರಿಸಲಿ. ಮಧ್ವರಾಜ್ ಅವರ ಉದ್ಯಮಕ್ಕೆ ಅಡ್ಡಗಾಲು ಹಾಕುವ ಮೂಲಕ ಬಿಜೆಪಿ ಐಟಿ, ಇಡಿ ದಾಳಿಯ ಭಯ ಹುಟ್ಟಿಸಿರುತ್ತದೆ. ಇದಕ್ಕೆ ಹೆದರಿ ಮಧ್ವರಾಜ್ ಬಿಜೆಪಿ ಸೇರಿದ್ದಾರೆ ಎಂದು ಮಹಮ್ಮದ್ ನಲಪಾಡ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT