ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕ ವಿಚಾರಗಳಿಗೆ ಮಣೆ ಹಾಕಬೇಡಿ

ಕರಾವಳಿ ಪ್ರಜಾಧ್ವನಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ
Last Updated 18 ಮಾರ್ಚ್ 2023, 14:00 IST
ಅಕ್ಷರ ಗಾತ್ರ

ಉಡುಪಿ: ವಿಧಾನಸಭಾ ಚುನಾವಣೆ ಹತ್ತಿರುವಾಗುತ್ತಿದ್ದಂತೆ ಬಿಜೆಪಿ ಮತ್ತೆ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ವಾಗ್ದಾಳಿ ನಡೆಸಿದರು.

ಶುಕ್ರವಾರ ಸಂತೆಕಟ್ಟೆಯಲ್ಲಿ ನಡೆದ ಕರಾವಳಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಎಂದೂ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ಈ ಬಾರಿಯೂ ಇತಿಹಾಸವನ್ನು ತಿರುಚಿ ಮತ ಗಿಟ್ಟಿಸುವ ಕುತುಂತ್ರ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ನಾಯಕರೇ ಅಭಿವೃದ್ಧಿ ವಿಚಾರಗಳನ್ನು ಪ್ರಶ್ನೆ ಮಾಡುವ ಬದಲು ಲವ್ ಜಿಹಾದ್, ಹಿಜಾಬ್, ಹಲಾಲ್, ಆಜಾನ್‌ ಬಗ್ಗೆ ಮಾತನಾಡುವಂತೆ ಭಾವಾತ್ಮಕವಾಗಿ ಕೆರಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಅಭಿವೃದ್ಧಿ ವಿಚಾರಗಳನ್ನು ಮರೆತು ಭಾವನಾತ್ಮಕ ವಿಚಾರಗಳಿಗೆ, ಕೋಮುವಾದಕ್ಕೆ ಮನ್ನಣೆ ನೀಡಿದ ಪರಿಣಾಮ ಕಾಂಗ್ರೆಸ್‌ ಸೋಲು ಅನುಭವಿಸಬೇಕಾಯಿತು. ಕರಾವಳಿಯಲ್ಲಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರು, ಈ ಭಾಗದಿಂದ ನಾಲ್ವರು ಸಚಿವರಾಗಿದ್ದರು.

ಆದರೆ, ಬಿಜೆಪಿ ಜನರನ್ನು ಭಾವನಾತ್ಮಕವಾಗಿ ಕೋಮು ಪ್ರಚೋದನೆ ಮಾಡಿದ ಪರಿಣಾಮ 32 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಬೇಕಾಯಿತು. ಈ ಬಾರಿಯ ಚುನಾವಣೆಯಲ್ಲಿ ಕರಾವಳಿಯ ಮತದಾರರು ಬಿಜೆಪಿಯ ಷಡ್ಯಂತ್ರಕ್ಕೆ ಬಲಿಯಾಗಬಾರದು. ಅಭಿವೃದ್ಧಿಯ ಆಧಾರದಲ್ಲಿ ಮತ ಹಾಕಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಐಟಿ, ಬಿಟಿ, ಟೆಕ್ಸ್‌ಟೈಲ್ ಪಾರ್ಕ್‌ ನಿರ್ಮಾಣ ಮಾಡಲಿದೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನಿಗಮ ರಚನೆ ಮಾಡಲಿದೆ. ಶಿಕ್ಷಣ, ಉದ್ಯೋಗ ಸೃಷ್ಟಿ, ಸಹಭಾಳ್ವೆಗೆ ಒತ್ತು ನೀಡಲಿದೆ. ಕಾಂಗ್ರೆಸ್‌ನಿಂದ ಅಧಿಕಾರ ಪಡೆದ ಎಲ್ಲರೂ ಪಕ್ಷಕ್ಕೆ ಋಣ ತೀರಿಸಬೇಕಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯ ಕೊಡುಗೆಗಳನ್ನು ಜನರ ಮನೆಗೆ ತಲುಪಿಸುವ ಕೆಲಸ ಮಾಡಬೇಕು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ಯಾನಲಿಸ್ಟ್‌ ವೆರೊನಿಕಾ ಕರ್ನೆಲಿಯೊ, ಮುಖಂಡರಾದ ಎಂ.ಎ.ಗಫೂರ್, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಪ್ರಸಾದ್ ಕಾಂಚನ್, ದಿವಾಕರ್ ಕುಂದರ್, ಪ್ರಖ್ಯಾತ್ ಶೆಟ್ಟಿ, ರಾಜು ಪೂಜಾರಿ, , ದಿನಕರ ಹೇರೂರು, ಸರಳ ಕಾಂಚನ್‌, ಅಣ್ಣಯ್ಯ ಶೇರಿಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT