ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತರ ಮೇಲೆ ಮತಾಂತರ ಸುಳ್ಳು ಆರೋಪ: ಪ್ರಶಾಂತ್ ಜತ್ತನ್ನ

Last Updated 28 ಸೆಪ್ಟೆಂಬರ್ 2021, 15:30 IST
ಅಕ್ಷರ ಗಾತ್ರ

ಉಡುಪಿ: ಕೆಲವು ಸಂಘಟನೆಗಳು ಕ್ರೈಸ್ತ ಸಮುದಾಯದ ಮೇಲೆ ಮತಾಂತರದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ದೂರಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಕಾರ್ಕಳದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲವರು ಪ್ರಾರ್ಥನಾ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ. ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಾಧ್ಯಮಗಳ ಮುಂದೆ ದಾಳಿ ಮಾಡಿರುವುದಾಗಿ ಒಪ್ಪಿಕೊಂಡರೂ ದಾಳಿಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿಲ್ಲ ಎಂದು ಆರೋಪಿಸಿದರು.

ಈಚೆಗೆ ಘಟನಾ ಸ್ಥಳಕ್ಕೆ ಸತ್ಯಶೋಧನಾ ಸಮಿತಿ ಭೇಟಿನೀಡಿ ಮಾಹಿತಿ ಕಲೆಹಾಕಲಾಗಿದ್ದು, ಅಲ್ಲಿ ಬಲವಂತದ ಮತಾಂತರ ನಡೆಯುತ್ತಿರಲಿಲ್ಲ. ಅಲ್ಲಿ ಸೇರಿದ್ದವರೆಲ್ಲರೂ ಸ್ವಇಚ್ಛೆಯಿಂದ ಪ್ರಾರ್ಥನೆ ಮಾಡಲು ಬಂದಿದ್ದರು ಎಂಬ ಸತ್ಯ ಗೊತ್ತಾಗಿದೆ. ಪ್ರಾರ್ಥನೆ ಮಾಡುವಾಗ ಏಕಾಏಕಿ ದಾಳಿ ಮಾಡಿರುವುದು ಖಂಡನೀಯ ಎಂದರು.

ಹಿಂದೆ ಶಿಕ್ಷಣ ಮೇಲ್ಜಾತಿಯವರಿಗೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಕ್ರೈಸ್ತ ಸಮಾಜ ಎಲ್ಲೆಡೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಎಲ್ಲ ಜಾತಿ, ಧರ್ಮದವರಿಗೆ ಶಿಕ್ಷಣ ಕೈಗೆಟುಕುವಂತೆ ಮಾಡಿತು. ಕ್ರೈಸ್ತರು ಬಲವಂತದ ಮತಾಂತರಕ್ಕೆ ಎಂದೂ ಕೈಹಾಕುವುದಿಲ್ಲ ಎಂದು ಪ್ರಶಾಂತ್ ಜತ್ತನ್ನ ಹೇಳಿದರು.

‘ಈಚೆಗೆ ಶಾಸಕ ಗೂಳಿಹಟ್ಟಿ ಶೇಖರ್ ಸದನದಲ್ಲಿ ತಮ್ಮ ತಾಯಿಯನ್ನು ಬಲವಂತದಿಂದ ಮತಾಂತರ ಮಾಡಲಾಗಿದೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಮಾನಸಿಕ ಸಮಾಧಾನ ಹಾಗೂ ಶಾಂತಿಗೆ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿ ಅವರ ತಾಯಿ ಹೇಳಿಕೆ ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆಯಿಂದ ಮುಂದೆ ಕ್ರೈಸ್ತರ ವಿರುದ್ಧ ಕಾನೂನು ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚಾಗಲಿವೆ ಎಂದು ಜತ್ತನ್ನ ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಐಎಫ್‌ಕೆಸಿಎ ಅಧ್ಯಕ್ಷ ಡಾ.ನೇರಿ ಕರ್ನೆಲಿಯೊ ಗೌರವಾಧ್ಯಕ್ಷ ಲುವಿಸ್‌ ಲೊಬೊ, ಭಾರತೀಯ ಕ್ರೈಸ್ತ ಒಕ್ಕೂಟದ ಕಾರ್ಯದರ್ಶಿ ಪೀಟರ್ ದಾಂತಿ, ಸಂಯೋಜಕರಾದ ಗ್ಲ್ಯಾಡ್ಸನ್‌ ಕರ್ಕಡ, ಸಮಾಜದ ಮುಖಂಡ ರಾಬರ್ಟ್‌ ಮಿನೇಜಸ್, ಥಾಮಸ್ ಸುವಾರಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT