ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಾರಿಯರ್ಸ್‌ಗೆ 25 ಬೆಂಗಾವಲು ವಾಹನಗಳ ನಮನ

ಕೊರೊನಾ ವಾರಿಯರ್ಸ್‌ಗೆ ಪೊಲೀಸ್ ಇಲಾಖೆಯಿಂದ ಅಭಿಮಾನದ ಗೌರವ
Last Updated 23 ಏಪ್ರಿಲ್ 2020, 4:20 IST
ಅಕ್ಷರ ಗಾತ್ರ

ಮಂಗಳೂರು: ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕೋವಿಡ್ -19 ಸಮರದಲ್ಲಿ ತೊಡಗಿಸಿಕೊಂಡಿರುವ ನೂರಾರು ಮಂದಿ ಕೊರೊನಾ ವಾರಿಯರ್ಸ್‌ಗಳಿಗೆ ಮಂಗಳೂರು ನಗರ ಪೊಲೀಸರಿಂದ ಬುಧವಾರ ವಿಶೇಷ ಗೌರವ ಸಲ್ಲಿಸಲಾಯಿತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನೇತೃತ್ವದಲ್ಲಿ, ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸುರಕ್ಷಿತ ಅಂತರ ಕಾಯ್ದುಕೊಂಡು ಇಲ್ಲಿನ ವೆನ್ಲಾಕ್‌ ಆಸ್ಪತ್ರೆ ಎದುರು ನಿಂತಿದ್ದ ಕೋವಿಡ್- 19 ವಾರಿಯರ್ಸ್‌ಗೆ 25 ಪೊಲೀಸ್ ಬೆಂಗಾವಲು ವಾಹನಗಳ ಮೂಲಕ ಗೌರವ ಸಲ್ಲಿಸಲಾಯಿತು.

ಬೆಳಿಗ್ಗೆ 10.45 ಕ್ಕೆ ಎಲ್ಲ ವೈದ್ಯರು, ಆರೋಗ್ಯ ಸಿಬ್ಬಂದಿ, ಪ್ಯಾರಾಮೆಡಿಕಲ್‌ ಸಿಬ್ಬಂದಿ ವೆನ್ಲಾಕ್‌ ಆವರಣದಲ್ಲಿ ಮುಖವಾಡಗಳನ್ನು ಧರಿಸಿ ನಿಂತಿದ್ದರು. ಸರಿಯಾಗಿ 11 ಗಂಟೆಗೆ ಪೊಲೀಸ್ ಬೆಂಗಾವಲು ಪಡೆಯ ವಾಹನಗಳು ಸರದಿಯಲ್ಲಿ ಬಂದು, ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಸಿದವು. ಬೆಂಗಾವಲಿನ ಕೊನೆಯಲ್ಲಿ ಭಾರತದ ಧ್ವಜವನ್ನು ಹೊತ್ತ ‘ಗರುಡ’ ವ್ಯಾನ್ ವಿಶೇಷ ಗಮನ ಸೆಳೆಯಿತು.

ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರಿಗೆ ಪುಷ್ಪಗುಚ್ಛ ಅರ್ಪಿಸಿದರು. ವೆನ್ಲಾಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸದಾಶಿವ, ಆರ್‌ಎಂಒ ಡಾ. ಜೂಲಿಯನ್ ಸಲ್ಡಾನ, ಐಎಂಎ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್‌, ವೈದ್ಯಕೀಯ ಕಾಲೇಜಿನ ತಲಾ ಒಬ್ಬ ಪ್ರತಿನಿಧಿ ಗೌರವ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಎಚ್‌ಒ ಡಾ.ರಾಮಚಂದ್ರ ಬಾಯರಿ, ರಾಜ್ಯ ಅಥವಾ ರಾಷ್ಟ್ರದಲ್ಲಿ ಈ ರೀತಿಯ ವಿಶಿಷ್ಟವಾದ ಗೌರವವನ್ನು ಸಲ್ಲಿಸಿರುವ ಪೊಲೀಸ್ ಆಯುಕ್ತರು ಮತ್ತು ಅವರ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ಕೆಎಂಸಿ ಹೃದ್ರೋಗ ವಿಭಾಗದ ಡಾ.ಪದ್ಮನಾಭ ಕಾಮತ್ ಮಾತನಾಡಿ, ಈ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಅತ್ಯಂತ ಧೈರ್ಯಶಾಲಿಗಳು. ಅವರನ್ನು ಸೂಪರ್ ಹೀರೋಗಳು ಎಂದು ಕರೆಯಬೇಕು. ವೆನ್ಲಾಕ್‌ ಆಸ್ಪತ್ರೆಯ ವೈರಾಲಜಿ ವಿಭಾಗದ 10-12 ಸದಸ್ಯರ ತಂಡವು ನಿರಂತರವಾಗಿ ಕೆಲಸ ಮಾಡುತ್ತಿದ್ದು, ನಿತ್ಯ 90-100 ಗಂಟಲುದ್ರವದ ಮಾದರಿಗಳ ಪರೀಕ್ಷೆ ಮಾಡುತ್ತಿದೆ. ಯುದ್ಧಭೂಮಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುವ ವೀರ ಯೋಧರಂತೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್‌. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ ಇದ್ದರು.

ವೈದ್ಯರು, ಶುಶ್ರೂಷಕಿಯರು, ಅರೆವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಗೆ ಗೌರವವನ್ನು ಸಲ್ಲಿಸಿರುವುದು ಅಪಾರ ತೃಪ್ತಿಕರವಾದ ಭಾವನೆ ಮೂಡಿಸಿದೆ.
-ಡಾ.ಪಿ.ಎಸ್‌. ಹರ್ಷ ನಗರ ಪೊಲೀಸ್‌ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT