ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯಕ್ಕೆ ಕೋವಿಡ್ ಹರಡದಂತೆ ಎಚ್ಚರ: ಶಾಸಕ ರಘುಪತಿ ಭಟ್‌

Last Updated 19 ಮೇ 2020, 15:06 IST
ಅಕ್ಷರ ಗಾತ್ರ

ಉಡುಪಿ: ಹೊರ ಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಂದ 7,000ಕ್ಕೂ ಅಧಿಕ ಮಂದಿ ಜಿಲ್ಲೆಗೆ ಬಂದಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸಮುದಾಯದಲ್ಲಿ ಕೋವಿಡ್ ಹರಡದಂತೆ ಎಚ್ಚರವಹಿಸಲಾಗಿದೆ ಎಂದು ಶಾಸಕ ರಘುಪತಿಭಟ್ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ನೀಡಲಾದ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಜಿಲ್ಲೆಯಲ್ಲಿರುವ 12 ಪಾಸಿಟಿವ್ ಪ್ರಕರಣಗಳು ಹೊರರಾಜ್ಯ ಹಾಗೂ ವಿದೇಶದಿಂದ ಬಂದವರಿಂದ ಬಂದಿವೆ. ಸೋಂಕಿತರು ಜಿಲ್ಲೆಗೆ ಬಂದ ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸಿರುವ ಕಾರಣ ಸಮುದಾಯಕ್ಕೆ ಸೋಂಕು ಹರಡಿಲ್ಲ ಎಂದರು.

ಎಲ್ಲ ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ತಂಡವಾಗಿ ಕೆಲಸ ಮಾಡುತ್ತಿರುವುದರಿಂದ ಸೋಂಕು ನಿಯಂತ್ರಣದಲ್ಲಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿರುವವರನ್ನು ಬಿಡುಗಡೆಗೊಳಿಸುವ ಮೊದಲು ಗಂಟಲದ್ರವ ಸಂಗ್ರಹಿಸಬೇಕಿದ್ದು, ಸಂಚಾರಿ ವಾಹನಗಳ ಮೂಲಕ ಸುಲಭವಾಗಿ ಮತ್ತು ಸುರಕ್ಷಿತವಾಗಿ ತೆಗೆಯಲು ಅನುಕೂಲವಾಗಲಿದೆ ಎಂದರು.

ಕಾರ್ಕಳದಲ್ಲಿ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ, ಜಿಲ್ಲಾಧಿಕಾರಿ ಜಿ.ಜಗದೀಶ್, ರಾಜ್ಯ ಸರ್ಕಾರ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ಕೇರಳ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಮೇ 31ರವರೆಗೆ ನಿರ್ಬಂಧ ವಿಧಿಸಿದೆ ಎಂದರು.

ಜಿಲ್ಲೆಗೆ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಎಲ್ಲರನ್ನೂ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿದೆ. ಕುಂದಾಪುರ ತಾಲ್ಲೂಕಿನಲ್ಲಿ ಒಂದು ಸಂಚಾರಿ ಕೋವಿಡ್ ಮಾದರಿ ಸಂಗ್ರಹ ವಾಹನವಿದ್ದು, ಉಡುಪಿ ಮತ್ತು ಕಾರ್ಕಳ ತಾಲೂಕಿಗೂ ವಾಹನಗಳ ಸೌಲಭ್ಯ ಸಿಕ್ಕಿರುವುದು ಪರೀಕ್ಷೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಸಂಚಾರಿ ಮಾದರಿ ಸಂಗ್ರಹ ವಾಹನಕ್ಕೆ ₹ 30,000 ವೆಚ್ಚವಾಗಿದ್ದು, ದಾನಿಗಳಾದ ಇಬ್ರಾಹಿಂ ಗೋವಾ ಹಾಗೂ ನಿತಿನ್ ಶೆಟ್ಟಿ, ಅಬ್ದುಲ್ ರೆಹಮಾನ್‌ ನೆರವು ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಚಾರಿ ವಾಹನದ ಮೂಲಕ ಸ್ವಾಬ್ ಸಂಗ್ರಹ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ, ಖಜಾಂಚಿ ಚಂದ್ರಶೇಖರ್, ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ದಿವಾಕರ ಖಾರ್ವಿ, ರವಿ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT