ಗುರುವಾರ , ಜುಲೈ 29, 2021
23 °C
ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ; ಮತ್ತೆ ಆತಂಕ

ಉಡುಪಿ: ಗಾಯದ ಮೇಲೆ ಸೀಲ್‌ಡೌನ್ ಬರೆ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲವಾಗಿದ್ದರೂ ಹೋಟೆಲ್‌ ಉದ್ಯಮ ಮಾತ್ರ ಚೇತರಿಕೆ ಕಂಡಿಲ್ಲ. ಜಿಲ್ಲೆಯ ಶೇ 40ರಷ್ಟು ಹೋಟೆಲ್‌ಗಳು ಮಾತ್ರ ತೆರೆದಿದ್ದು, ಅವು ಕೂಡ ಗ್ರಾಹಕರ ಬರ ಎದುರಿಸುತ್ತಿವೆ. ಒಂದೆಡೆ ಕಾರ್ಮಿಕರ ಸಮಸ್ಯೆ, ಮತ್ತೊಂದೆಡೆ ನಿರ್ವಹಣಾ ವೆಚ್ಚ ಭರಿಸಲಾಗದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಹೋಟೆಲ್‌ ಉದ್ಯಮ ಮತ್ತೆ ಮುಚ್ಚುವ ಭೀತಿಯಲ್ಲಿದೆ.

ಹೋಟೆಲ್‌ಗಳತ್ತ ಸುಳಿಯದ ಗ್ರಾಹಕರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗ್ರಾಹಕರು ಹೋಟೆಲ್‌ಗಳತ್ತ ಮುಖ ಮಾಡುತ್ತಿಲ್ಲ. ಉಡುಪಿ ಹಾಗೂ ಮಣಿಪಾಲದ ಬಹುತೇಕ ಹೋಟೆಲ್‌ಗಳು ಖಾಲಿಯಾಗಿವೆ. ಸೋಂಕು ಹರಡುವಿಕೆ ತಡೆಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ಗ್ರಾಹಕರು ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು ನಗರದ ಹೋಟೆಲ್‌ ಉದ್ಯಮಿಯೊಬ್ಬರು.

ಸೀಲ್‌ಡೌನ್‌ ಎಫೆಕ್ಟ್‌: ಉಡುಪಿಯ ಬನ್ನಂಜೆಯಲ್ಲಿರುವ ರೆಸ್ಟೊರೆಂಟ್‌ನ ಬಾಣಸಿಗನಿಗೆ ಹಾಗೂ ಕರಾವಳಿ ಬೈಪಾಸ್‌ ಬಳಿಯ ಮೀನಿನ ಹೋಟೆಲ್ ಮಾಲೀಕರಿಗೆ ಕೋವಿಡ್‌ ದೃಢಪಟ್ಟಿದ್ದು, ಎರಡೂ ಹೋಟೆಲ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಮತ್ತಷ್ಟು ಆತಂಕಗೊಂಡಿದ್ದಾರೆ ಎಂದರು.

ಹೋಟೆಲ್‌ ಬಾಡಿಗೆ, ಕಾರ್ಮಿಕರ ವೇತನ, ತರಕಾರಿ, ಹಾಲು, ಗ್ಯಾಸ್‌ ಹೀಗೆ, ನಿರ್ವಹಣಾ ವೆಚ್ಚ ಭರಿಸಾಗದೆ ಹಲವು ಹೋಟೆಲ್‌ಗಳು ಬಾಗಿಲು ತೆರೆದಿಲ್ಲ. ಬೆರಳೆಣಿಕೆ ರೆಸ್ಟೊರೆಂಟ್‌ಗಳು ಮಾತ್ರ ತೆರೆದಿದ್ದು, ಅವು ಕೂಡ ಬಾಗಿಲು ಹಾಕುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಉದ್ಯೋಗಿಗಳು, ಹಾಸ್ಟೆಲ್‌ಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು, ಹೊರ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿರುವ ರೋಗಿಗಳ ಸಂಬಂಧಿಗಳು, ಹೀಗೆ ಅನಿವಾರ್ಯವಿದ್ದವರು ಮಾತ್ರ ಹೋಟೆಲ್‌ಗಳಿಗೆ ಬರುತ್ತಿದ್ದಾರೆ. ಕುಟುಂಬ ಸಹಿತ ಭೇಟಿ ನೀಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಹೋಟೆಲ್‌ ಸಿಬ್ಬಂದಿ ರಾಘವೇಂದ್ರ.

ಜಿಲ್ಲೆಯ ಹೋಟೆಲ್‌ ಉದ್ಯಮದ ಬೆಳವಣಿಗೆಗೆ ಪ್ರವಾಸೋದ್ಯಮ ಪೂರಕವಾಗಿತ್ತು. ಕೊರೊನಾ ಭೀತಿ ಹಾಗೂ ಮಳೆಗಾಲವಾಗಿರುವುದರಿಂದ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲ ಕಚ್ಚಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸುಳಿವಿಲ್ಲ. ಮಲ್ಪೆ ಬೀಚ್‌ ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರು ಕಾಣುತ್ತಿಲ್ಲ. ಇದರಿಂದ ಹೋಟೆಲ್‌ ಉದ್ಯಮ ಸಂಪೂರ್ಣ ಸೊರಗಿದೆ ಎಂದರು.

ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ನಷ್ಟದ ಹೊರೆ ತಾಳಲಾರದೆ ಹಂತಹಂತವಾಗಿ ಹೋಟೆಲ್‌ಗಳು ಮುಚ್ಚುತ್ತಿವೆ. ಸೋಂಕಿಗೆ ಔಷಧ ಕಂಡುಹಿಡಿದರೆ ಮಾತ್ರ ಉದ್ಯಮ ಚೇತರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು