ಶುಕ್ರವಾರ, ಆಗಸ್ಟ್ 12, 2022
27 °C
105 ಮೃತ ಸೋಂಕಿತರ ಪೈಕಿ 76 ಮಂದಿ 55 ವರ್ಷ ಮೇಲ್ಪಟ್ಟವರು

ಉಡುಪಿ: ಕೋವಿಡ್‌ಗೆ ಹಿರಿಯ ಜೀವಗಳೇ ಹೆಚ್ಚು ಬಲಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್–19 ಸೋಂಕು ಯಾವ ವಯೋಮಾನದವರಿಗೆ ಮಾರಣಾಂತಿಕವಾಗಬಲ್ಲದು ಎಂಬ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೂ (ಸೆ.3ರವರೆಗೆ ಮಾಹಿತಿ) ಕೋವಿಡ್‌ ಸೋಂಕು ತಗುಲಿ ಮೃತಪಟ್ಟ 105 ಜನರ ಪೈಕಿ 76 ಮಂದಿ 55 ವರ್ಷ ಮೇಲ್ಪಟ್ಟವರು.

ಹಿರಿಯ ಜೀವಗಳು ಹೆಚ್ಚು ಬಲಿ

ಜಿಲ್ಲೆಯಲ್ಲಿ 14 ವರ್ಷದೊಳಗಿನ ಸೋಂಕಿತರ ಸಾವಿನ ಪ್ರಮಾಣ ಶೇ 0.09 ಇದ್ದರೆ, 65 ವರ್ಷ ಮೇಲ್ಪಟ್ಟವರ ಸಾವಿನ ಪ್ರಮಾಣ ಶೇ 4.39ರಷ್ಟಿದೆ. ಅಂದರೆ, 100 ವೃದ್ಧರಿಗೆ ಸೋಂಕು ತಗಲಿದರೆ ಅವರಲ್ಲಿ 4ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. 

55 ರಿಂದ 64 ವರ್ಷದೊಳಗಿನವರ ಸಾವಿನ ಪ್ರಮಾಣ ಶೇ 1.90ರಷ್ಟಿದ್ದು, ಈ ವಯೋಮಾನದ ಪ್ರತಿ 100 ಸೋಂಕಿತರಲ್ಲಿ ಇಬ್ಬರು ಬಲಿಯಾಗುತ್ತಿದ್ದಾರೆ. ಸದ್ಯ ಹಿರಿಯ ಜೀವಗಳನ್ನು ಉಳಿಸಿಕೊಳ್ಳುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.

ಪುರುಷರ ಸಾವು ಹೆಚ್ಚು‌

ಜಿಲ್ಲೆಯಲ್ಲಿ 5,120 ಸೋಂಕಿತ ಮಹಿಳೆಯರಲ್ಲಿ 23 ಸ್ತ್ರೀಯರು ಮೃತಪಟ್ಟಿದ್ದಾರೆ. 6,999 ಪುರುಷ ಸೋಂಕಿತರಲ್ಲಿ 82 ಮಂದಿ ಸಾವನ್ನಪ್ಪಿದ್ದಾರೆ. ಅಂಕಿ–ಅಂಶಗಳ ಪ್ರಕಾರ ಮಹಿಳೆಯರಿಗಿಂತ ಪುರುಷರ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಸ್ಪಷ್ಟವಾಗುತ್ತದೆ.

ಮಹಿಳೆಯರ ಸಾವಿನ ಪ್ರಮಾಣ ಶೇ 0.45ರಷ್ಟಿದ್ದರೆ, ಪುರುಷರ ಸಾವಿನ ಪ್ರಮಾಣ ಶೇ 1.17ರಷ್ಟಿದೆ. ಇದರರ್ಥ ಮಹಿಳೆಯರಿಗೆ ಸೋಂಕು ಹೆಚ್ಚು ಅಪಾಯಕಾರಿಯಲ್ಲ ಎಂದಲ್ಲ. ಮಹಿಳೆಯರಿಗಿಂತ ಪುರುಷರಲ್ಲಿ ಗಂಭೀರ ಅನಾರೋಗ್ಯ ಸಮಸ್ಯೆಗಳಿರುವುದು ಕಾರಣ ಎನ್ನುತ್ತಾರೆ ವೈದ್ಯರು.

ಯಾವ ತಾಲ್ಲೂಕಿನಲ್ಲಿ ಹೆಚ್ಚು ಸಾವು

ಇದುವರೆಗೂ ಮೃತರಾದ 105 ಜನರಲ್ಲಿ ಉಡುಪಿ ತಾಲ್ಲೂಕಿನವರು ಹೆಚ್ಚು. ಮೃತರ ಪೈಕಿ ಶೇ 19ರಷ್ಟು ಉಡುಪಿ ತಾಲ್ಲೂಕಿನವರಾದರೆ, ಕುಂದಾಪುರ–ಶೇ 11, ಬೈಂದೂರು–ಶೇ11, ಕಾಪು–ಶೇ 9, ಕಾರ್ಕಳ–ಶೇ 8, ಬ್ರಹ್ಮಾವರ–ಶೇ 8 ಹಾಗೂ ಹೆಬ್ರಿಯ ಶೇ 1ರಷ್ಟು ಸೋಂಕಿತರು ಇದ್ದಾರೆ.

ಉಡುಪಿಯಲ್ಲಿ ಸಾವಿನ ಪ್ರಮಾಣ ಕಡಿಮೆ:

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಮರಣ ಪ್ರಮಾಣ ತೀರಾ ಕಡಿಮೆ ಇರುವುದನ್ನು ಕಾಣಬಹುದು. ಅತಿ ಹೆಚ್ಚು ಸೋಂಕಿತರು ಮೃತಪಟ್ಟ ಜಿಲ್ಲೆಗಳಲ್ಲಿ ಬೀದರ್ (ಶೇ 2.9) ಮೊದಲ ಸ್ಥಾನದಲ್ಲಿದ್ದರೆ, ಉಡುಪಿ (ಶೇ 0.8) 29ನೇ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿರುವ ಅತ್ಯುತ್ತಮ ವೈದ್ಯಕೀಯ ಸೌಲಭ್ಯ, ಕೋವಿಡ್‌ ಪರೀಕ್ಷಾ ಪ್ರಮಾಣದಲ್ಲಿ ಹೆಚ್ಚಳ, ಆರಂಭಿಕ ಹಂತದಲ್ಲಿಯೇ ಸೋಂಕು ಪತ್ತೆಹಚ್ಚಿ, ಚಿಕಿತ್ಸೆಗೊಳಪಡಿಸುತ್ತಿರುವುದರಿಂದ ಮರಣ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

‘ಹಿರಿಯ ಜೀವಗಳ ರಕ್ಷಣೆ ಎಲ್ಲರ ಹೊಣೆ’

ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್‌ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಿ ಹಿರಿಯ ನಾಗರಿಕರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾದ ಬಳಿಕ ಆಸ್ಪತ್ರೆಗಳಿಗೆ ಬರುತ್ತಿದ್ದು, ಸಾವಿನ ಪ್ರಮಾಣ ಹೆಚ್ಚುತ್ತಿದೆ. ಹೋಂ ಐಸೊಲೇಷನ್‌ನಲ್ಲಿರುವ ವ್ಯಕ್ತಿಗಳು ಹಿರಿಯರ ಸಂಪರ್ಕದಿಂದ ದೂರವಿರಬೇಕು. ಮನೆಯ ಸದಸ್ಯರೆಲ್ಲರೂ ಪ್ರಾಥಮಿಕ ಸಂಪರ್ಕಿತರಾಗುವುದರಿಂದ ಕಡ್ಡಾಯವಾಗಿ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಿರಿಯರಿಗೆ ಸೋಂಕು ತಗುಲಿರುವುದು ಪತ್ತೆಯಾದರೆ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ದಾಖಲಿಸಬೇಕು. ಶೇ 95ರಷ್ಟು ಮಂದಿಗೆ ಸೋಂಕು ಅಪಾಯಕಾರಿಯಾಗದಿರಬಹುದು, ಶೇ 5ರಷ್ಟು ಮಂದಿಗೆ ಖಂಡಿತ ಮಾರಣಾಂತಿಕ. ಈ ಶೇ 5ರಷ್ಟು ಜನರಲ್ಲಿ ತಂದೆ ತಾಯಿ, ಅಜ್ಜ ಅಜ್ಜಿ ಹಾಗೂ ಕುಟುಂಬದ ಹಿರಿಯರು ಇರಬಹುದು. ಹಾಗಾಗಿ, ಸೋಂಕಿನ ಬಗ್ಗೆ ಅಸಡ್ಡೆ ಬೇಡ. ಹಿರಿಯರನ್ನು ರಕ್ಷಿಸಬೇಕಾದ ಹೊಣೆಗಾರಿಕೆ ಎಲ್ಲರದ್ದು ಎನ್ನುತ್ತಾರೆ ಡಿಎಚ್‌ಒ ಸುಧೀರ್ ಚಂದ್ರ ಸೂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು