ಬುಧವಾರ, ಸೆಪ್ಟೆಂಬರ್ 29, 2021
20 °C
ಜಿಲ್ಲೆಗೆ ಪ್ರವಾಸಿಗರ ದಾಂಗುಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ, ಮೂರನೇ ಅಲೆಯ ಆತಂಕ

ಕರಾವಳಿಗೆ ಕೇರಳ ಆತಂಕ: ಮೈಮರೆತರೆ ಅಪಾಯ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಸುರಕ್ಷತಾ ಕ್ರಮಗಳ ಪಾಲನೆ ಕಾಣುತ್ತಿಲ್ಲ. ಜನರ ಮುಖದ ಮೇಲಿದ್ದ ಮಾಸ್ಕ್‌ ಜೇಬು, ಕುತ್ತಿಗೆ ಸೇರಿದೆ. ಅಂತರ ಪಾಲನೆಯೂ ಕಾಣುತ್ತಿಲ್ಲ. ಪರಿಣಾಮ ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಮೂರನೇ ಅಲೆಯ ಆತಂಕ ಸೃಷ್ಟಿಯಾಗಿದೆ.

ಪಾಸಿಟಿವಿಟಿ ದರ ಶೇ 5ಕ್ಕೆ ಏರಿಕೆ: ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೋವಿಡ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದರೂ ಉಡುಪಿಯಲ್ಲಿ ಮಾತ್ರ ಏರಿಕೆಯಾಗುತ್ತಿದೆ. ಜುಲೈ ತಿಂಗಳ ಆರಂಭದಲ್ಲಿ ಶೇ 3ರ ಆಸುಪಾಸಿನಲ್ಲಿದ್ದ ಪಾಸಿಟಿವಿಟಿ ದರ ಸದ್ಯ ಶೇ 5ಕ್ಕೆ ಹೆಚ್ಚಾಗಿರುವುದು ಕಳವಳಕಾರಿ ವಿಚಾರ.

ಕೇರಳ ಕರಿ ನೆರಳು: ನೆರೆಯ ಕೇರಳದಲ್ಲಿ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಪ್ರತಿದಿನ 20,000ದಷ್ಟು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಮಂಗಳೂರು–ಉಡುಪಿ ಹಾಗೂ ಕೇರಳದ ಮಧ್ಯೆ ಜನ ಸಂಚಾರ ಹಾಗೂ ವ್ಯಾಪಾರ ವಹಿವಾಟು ಹೆಚ್ಚಿರುವುದರಿಂದ ಉಭಯ ಜಿಲ್ಲೆಗಳಲ್ಲಿ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದೆ.

ಕಳೆದ ವರ್ಷ ಕೂಡ ಮುಂಬೈ ಹಾಗೂ ಕೇರಳ ಕರಾವಳಿಗೆ ಕಂಟಕವಾಗಿ ಕಾಡಿತ್ತು. ಈಗ ಮತ್ತೆ ಭೀತಿ ಸೃಷ್ಟಿಯಾಗಿದೆ. ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಭಾರಿ ಬೆಲೆ ತೆರಬೇಕಾದೀತು ಎಂದು ಎಚ್ಚರಿಸುತ್ತಾರೆ ತಜ್ಞ ವೈದ್ಯರು.

ಜಿಲ್ಲೆಗೆ ದಾಂಗುಡಿ ಇಟ್ಟ ಪ್ರವಾಸಿಗರು: ಲಾಕ್‌ಡೌನ್‌ ತೆರೆವಾಗುತ್ತಿದ್ದಂತೆ ಹೊರ ಜಿಲ್ಲೆಗಳಿಂದ ಪ್ರವಾಸಿಗರ ದಂಡು ಉಡುಪಿಗೆ ನುಗ್ಗುತ್ತಿದೆ. ಇಲ್ಲಿನ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಪ್ರವಾಸಿಗರಿಂದ ಗಿಜಿಗುಡುತ್ತಿವೆ. ದರ್ಶನದ ಸಾಲಿನಲ್ಲಿ ಅಂತರ ಪಾಲನೆಯಾಗುತ್ತಿಲ್ಲ. ಮಾಸ್ಕ್ ಧರಿಸುವಂತೆ  ನಿರಂತರ ಸೂಚನೆಗಳನ್ನು ನೀಡುತ್ತಿದ್ದರೂ ಪ್ರವಾಸಿಗರು ಅಸಡ್ಡೆ ತೋರುತ್ತಿದ್ದಾರೆ ಎನ್ನುತ್ತಾರೆ ದೇವಸ್ಥಾನಗಳ ಸಿಬ್ಬಂದಿ.

ಬೀಚ್‌ಗಳಲ್ಲಿ ಪ್ರವಾಸಿಗರು ಹೆಚ್ಚಾಗಿದ್ದು, ವಾರಾಂತ್ಯದಲ್ಲಿ ಸಾವಿರಾರು ಮಂದಿ ಒಂದೆಡೆ ಸೇರುತ್ತಿದ್ದಾರೆ. ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಯಾವುದೇ ವಾಟರ್‌ ಸ್ಪೋರ್ಟ್ಸ್‌ಗಳನ್ನು ಆರಂಭಿಸಿಲ್ಲ. ಬೀಚ್‌ಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದರೂ ಪ್ರವಾಸಿಗರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಗುಂಪಾಗಿ ಸೇರುವುದು, ಮಾಸ್ಕ್ ಧರಿಸದೆ ಓಡಾಡುವುದು ಕಂಡುಬರುತ್ತಿದೆ ಎನ್ನುತ್ತಾರೆ ಮಲ್ಪೆ ಬೀಚ್‌ ನಿರ್ವಹಣಾ ಸಮಿತಿಯ ಸುದೇಶ್ ಶೆಟ್ಟಿ.

ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸದೆ ಬಂದರು ಸೇರಿದಂತೆ ಮೀನುಗಾರಿಕಾ ಸ್ಥಳಗಳಲ್ಲಿ ಓಡಾಡಿದರೆ ಮೀನುಗಾರರಿಗೆ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ಮೀನುಗಾರರಾದ ವಸಂತ್ ಸಾಲ್ಯಾನ್‌.

ಸಾರ್ವಜನಿಕರ ಅಸಡ್ಡೆ: ಜಿಲ್ಲೆಯಲ್ಲಿ 2ನೇ ಅಲೆಯ ತೀವ್ರತೆ ಹೆಚ್ಚಿದ್ದಾಗ ಸಾರ್ವಜನಿಕರು ಸುರಕ್ಷತಾ ಕ್ರಮಗಳ ಪಾಲನೆಗೆ ಒತ್ತು ನೀಡಿದ್ದರು. ಸೋಂಕು ಕಡಿಮೆಯಾದ ಕೂಡಲೇ ಸುರಕ್ಷತಾ ಕ್ರಮಗಳ ಪಾಲನೆ ಮರೆಯಾಗಿದ್ದು, ಗುಂಪು ಗೂಡುವಿಕೆ, ಮಾಸ್ಕ್ ಧರಿಸದೆ ಓಡಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಸೋಂಕು ಹರಡುವಿಕೆ ಪ್ರಮಾಣವೂ ಹೆಚ್ಚಾಗುತ್ತಿದೆ.

ಎಗ್ಗಿಲ್ಲದೆ ಕಾರ್ಯಕ್ರಮಗಳ ಆಯೋಜನೆ: ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ಸರಳವಾಗಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ನಿಯಮಗಳಿದ್ದರೂ ಪಾಲನೆಯಾಗುತ್ತಿಲ್ಲ. ಸಭೆ, ಸಮಾರಂಭಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕಾರ್ಯಕ್ರಮಗಳ ಆಯೋಜಕರೇ ಜಿಲ್ಲೆಯಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್.

ಜವಾಬ್ದಾರಿಯಿಂದ ವರ್ತಿಸಬೇಕು: ಜವಾಬ್ದಾರಿ ಸ್ಥಾನದಲ್ಲಿ ಇರುವ ರಾಜಕಾರಣಿಗಳು, ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು. ಜನಜಂಗುಳಿ ಸೇರುವ ಕಾರ್ಯಕ್ರಮ ಆಯೋಜನೆ ಮಾಡಬಾರದು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು ಜವಾಬ್ದಾರಿಯಿಂದ ವರ್ತಿಸಬೇಕು ಎನ್ನುತ್ತಾರೆ ಜಿಲ್ಲಾಧಿಕಾರಿ.

ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಬೆನ್ನಲ್ಲೇ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅದರಂತೆ, ಕೇರಳ ಹಾಗೂ ಮುಂಬೈನಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ 72 ಗಂಟೆ ಮೀರದ ನೆಗೆಟಿವ್ ವರದಿ ಹಾಜರುಪಡಿಸಬೇಕು. ಇಲ್ಲವಾದರೆ ಗಡಿಯಲ್ಲಿ ಜಿಲ್ಲೆಯೊಳಗೆ ಪ್ರವೇಶವಿಲ್ಲ. ಪರೀಕ್ಷಾ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಪ್ರವಾಸಿಗರು ಮಾರ್ಗಸೂಚಿ ಪಾಲಿಸುವ ಬಗ್ಗೆ ಪ್ರಮುಖ ದೇವಾಲಯ ಹಾಗೂ ಪ್ರವಾಸಿ ತಾಣಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

‘ಮಕ್ಕಳ ಸುರಕ್ಷತೆಗೆ ಒತ್ತು’: ಕೋವಿಡ್‌ ಮೂರನೇ ಅಲೆ ಮಕ್ಕಳಿಗೆ ಆತಂಕ ತಂದೊಡ್ಡುವ ಸಾಧ್ಯತೆ ಹಿನ್ನೆಲೆಯಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ 15 ವರ್ಷದೊಳಗಿನ 2.40 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತಿದೆ. ಅಪೌಷ್ಟಿಕತೆ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಜತೆಗೆ ಗಂಭೀರ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ ಸೋಂಕು ತಗುಲದಂತೆ ಎಚ್ಚರವಹಿಸಲಾಗಿದೆ. ಮಕ್ಕಳ ಪೋಷಕರಿಗೆ ಲಸಿಕೆ ಹಾಕಲಾಗುತ್ತಿದೆ ಎನ್ನುತ್ತಾರೆ ಡಿಎಚ್‌ಒ ಡಾ.ನಾಗಭೂಷಣ ಉಡುಪ.

ತಜ್ಞರ ಸಭೆ, ಸಲಹೆಗಳ ಅನುಷ್ಠಾನ: 2 ಬಾರಿ ಮಕ್ಕಳ ತಜ್ಞರ ಸಮಿತಿ ಸಭೆ ನಡೆಸಲಾಗಿದ್ದು, ತಜ್ಞರ ಸಲಹೆ ಸೂಚನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೆಚ್ಚುವರಿ ವೆಂಟಿಲೇಟರ್‌ ಹಾಗೂ 50 ಐಸಿಯು ಬೆಡ್‌ಗಳ ಅಳವಡಿಕೆ, ಜಿಲ್ಲೆಯಲ್ಲಿ ಮೂರು ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೋವಿಡ್‌ ಮಾರಣಾಂತಿಕವಾಗಬಹುದಾದ ಮಕ್ಕಳನ್ನು ಗುರುತಿಸಿ ಆಯುಷ್ಮಾನ್ ಭಾರತ್ ಯೋಜನೆ ಅಡಿ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು