ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಬದುಕಿನ ಮೇಲೆ ಕೋವಿಡ್ ಕಾರ್ಮೋಡ

ಅಷ್ಟಮಿ, ಚೌತಿಗೂ ಸಿಗದ ಅವಕಾಶ: ನವರಾತ್ರಿಗೆ ಸಿಗುವುದೇ ಅನುಮತಿ
Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಕಾರಣದಿಂದ ಕಲಾ ಪ್ರದರ್ಶನಗಳ ಮೇಲೆ ಸರ್ಕಾರ ವಿಧಿಸಿರುವ ನಿರ್ಬಂಧಗಳಿಂದ ಕಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಜೀವನ ಬೀದಿಗೆ ಬಿದ್ದಿದೆ. ಅಷ್ಟಮಿ, ಚೌತಿ, ನವರಾತ್ರಿಯ ಸಂದರ್ಭದಲ್ಲಿ ಬಿಡುವಿಲ್ಲದಷ್ಟು ಪ್ರದರ್ಶನ ನೀಡುತ್ತಿದ್ದ ಕಲಾವಿದರು ಈಗ ಕೆಲಸ ಇಲ್ಲದೆ ಖಾಲಿ ಕುಳಿತಿದ್ದು, ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.

ಯಕ್ಷಗಾನ, ನಾಟಕ, ಉತ್ಸವ, ಜಾತ್ರೆ, ಆರ್ಕೆಸ್ಟ್ರಾ, ಜಾನಪದ ಪ್ರದರ್ಶನ ಹೀಗೆ ಎಲ್ಲ ಕಲಾ ಪ್ರಕಾರಗಳ ಪ್ರದರ್ಶನಗಳಿಗೆ ನಿರ್ಬಂಧವಿರುವ ಕಾರಣ ಕಲಾವಿದರು ಬೀದಿಗೆ ಬಂದಿದ್ದಾರೆ. ಒಂದೆಡೆ, ಪ್ರದರ್ಶನಗಳು ಸಿಗುತ್ತಿಲ್ಲ, ಮತ್ತೊಂದೆಡೆ, ಹೊಟ್ಟೆ ಹೊರೆಯುವುದು ಅನಿವಾರ್ಯವಾಗಿರುವುದರಿಂದ ಕಲಾವಿದರು ಸ್ವಾಭಿಮಾನ ಬದಿಗಿಟ್ಟು ಅನ್ಯ ವೃತ್ತಿಗಳತ್ತ ಮುಖ ಮಾಡುತ್ತಿದ್ದಾರೆ.

ಹಲವರು ಆಟೊ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದ್ದರೆ, ಕೆಲವರು ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ, ಹೋಟೆಲ್‌ಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಕೆಲಸಕ್ಕೆ ಸೇರಿದ್ದಾರೆ. ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರೆಲ್ಲರೂ ನವರಾತ್ರಿಗಾದರೂ ಸರ್ಕಾರದಿಂದ ಶುಭ ಸುದ್ದಿ ಸಿಗಬಹುದು ಎಂದು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.

ಸರ್ಕಾರ ನವರಾತ್ರಿಯೊಳಗೆ ಕಲಾ ಪ್ರದರ್ಶನಕ್ಕೆ ಅನುಮತಿ ನೀಡಿದರೆ ಕಲಾವಿದರು ಮತ್ತೆ ಬದುಕು ಕೊಟ್ಟಿಕೊಳ್ಳಬಹುದು. ಇಲ್ಲವಾದರೆ ವೃತ್ತಿಯಿಂದಲೇ ವಿಮುಖರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಿದ್ದಾರೆ ಬಹುತೇಕ ಕಲಾವಿದರು.

ಯಕ್ಷಗಾನ ಕರಾವಳಿ ಕರ್ನಾಟಕದ ಗಡಿಮೀರಿ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಗೆ ಪಸರಿಸಿದ ಪರಿಣಾಮ, ದಶಕಗಳ ಹಿಂದೆಯೇ ಹೆಚ್ಚಿನ ಕಲಾವಿದರು ಮೂಲ ವೃತ್ತಿಯಾದ ಕೃಷಿ ಬಿಟ್ಟು ಯಕ್ಷ ಕಲೆಯತ್ತ ಆಕರ್ಷಿತರಾದರು. ಅವರೆಲ್ಲರ ಬದುಕು ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಮರಳಿ ಕೃಷಿಯತ್ತ ತೆರಳಲು ಕೃಷಿ ಭೂಮಿ ಇಲ್ಲ, ಕಲೆ ಮುಂದುವರಿಸಲು ಅವಕಾಶಗಳು ಸಿಗುತ್ತಿಲ್ಲ ಎಂದು ಪರಿಸ್ಥಿತಿಯ ಗಂಭೀರತೆ ವಿವರಿಸಿದರು ಸ್ವತಃ ಯಕ್ಷಗಾನ ಕಲಾವಿದರಾಗಿರುವ ಹಾಗೂ ಶ್ರೀ ಲಕ್ಷ್ಮಿಜನಾರ್ಧನ ಯಕ್ಷಗಾನ ಕಲಾಮಂಡಳಿಯನ್ನು ದಶಕಗಳಿಗೂ ಹೆಚ್ಚು ಕಾಲ ಮುನ್ನಡೆಸಿದ ಮುರಳಿ ಕಡೇಕಾರ್‌.

ಮಳೆಗಾಲದ 5 ರಿಂದ 6 ತಿಂಗಳು ಕರಾವಳಿಯ ಕಲಾವಿದರಿಗೆ ಸುಗ್ಗಿಯ ಕಾಲ. ಗಣೇಶೋತ್ಸವ, ಅಷ್ಟಮಿ, ನವರಾತ್ರಿ ಉತ್ಸವಗಳು ಅನ್ನ ಕೊಡುತ್ತಿದ್ದವು. ಕೊರೊನಾದಿಂದ ಪ್ರದರ್ಶನಗಳೇ ನಡೆಯದೆ ಕಲಾವಿದರು ನಡುನೀರಿನಲ್ಲಿ ಅತಂತ್ರರಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸುತ್ತಾರೆ ಕಡೇಕಾರ್‌.

ಯಕ್ಷಗಾನ ಕಲಾವಿದರಿಗೆ ಸಮಾಜದಲ್ಲಿ ಘನತೆ, ಗೌರವ ಹೆಚ್ಚಿದೆ. ಜೀವನ ನಿರ್ವಹಣೆಗೆ ಕೂಲಿ ಕೆಲಸಕ್ಕೆ ಹೋಗಲು, ಹೋಟೆಲ್‌ಗಳಲ್ಲಿ ದುಡಿಯಲು ಅವರ ಸ್ವಾಭಿಮಾನ ಅಡ್ಡಿಯಾಗುತ್ತಿದೆ. ವೃತ್ತಿ ಕಲಾವಿದರಂತೂ ಗಂಭೀರವಾದ ಸಮಸ್ಯೆಯಲ್ಲಿದ್ದಾರೆ. ಸರ್ಕಾರ ನಿರ್ಬಂಧಗಳ ಸಡಿಲಿಕೆಯೊಂದಿಗೆ ಹಾಗೂ ಕಠಿಣ ಷರತ್ತುಗಳೊಂದಿಗೆ ಮತ್ತೆ ಕಲಾ ಪ್ರದರ್ಶನಗಳಿಗೆ ಅವಕಾಶ ಕೊಡಬೇಕು.

ಕರಾವಳಿಯಲ್ಲಿ ಹೆಚ್ಚಿನವರು ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಜಿಲ್ಲೆಯಲ್ಲಿ 4 ಸಾವಿರ ಯಕ್ಷಗಾನ ವೃತ್ತಿ ಕಲಾವಿದರಿದ್ದಾರೆ. ಅವರಿಗೆ ಕಲೆಯ ಹೊರತಾದ ಜೀವನ ತಿಳಿದಿಲ್ಲ. ಪ್ರದರ್ಶನ ನೀಡಬೇಕು, ಬದುಕಿನ ಬಂಡಿ ಸಾಗಬೇಕು. ಈ ನಿಟ್ಟಿನಲ್ಲಿ ಕಲಾವಿದರ ಬದುಕಿಗೆ ಪೂರಕವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು.ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಮೊದಲು ಮೇಳಗಳ ಆಯೋಜನೆಗೆ ಅವಕಾಶ ನೀಡಿ, ಬಳಿಕ ಹಂತ ಹಂತವಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನೀಡಬೇಕು. ಇದರಿಂದ ಕಲಾವಿದರು ಹಾಗೂ ಕಲೆ ಉಳಿಯುತ್ತದೆ ಎನ್ನುತ್ತಾರೆ ಮುರಳಿ ಕಡೇಕಾರ್.

ಕೋವಿಡ್‌ನಿಂದಾಗಿ ಶುಭ ಸಮಾರಂಭಗಳಲ್ಲಿ ಅದ್ಧೂರಿತನ ಇಲ್ಲವಾಗಿದೆ. ಮದುವೆ, ಮೆಹಂದಿ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿದ್ದು, ಆರ್ಕೆಸ್ಟ್ರಾ, ನೃತ್ಯ, ವಾದ್ಯ ಕಾರ್ಯಕ್ರಮಗಳ ಆಯೋಜನೆ ಇಲ್ಲವಾಗಿದೆ. ಜತೆಗೆ, ಅಷ್ಟಮಿ ಹಾಗೂ ಚೌತಿ ಸಂದರ್ಭವೂ ಅವಕಾಶ ಸಿಗದಿರುವುದು ಆರ್ಕೆಸ್ಟ್ರಾ ಕಲಾವಿದರ ಬದುಕಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಕರಾವಳಿಯಲ್ಲಿ ಸಾವಿರಕ್ಕೂ ಹೆಚ್ಚು ಆರ್ಕೆಸ್ಟ್ರಾ ಕಲಾವಿದರಿದ್ದು, ಬಹುತೇಕರು ಸಮಸ್ಯೆಯಲ್ಲಿದ್ದಾರೆ ಎನ್ನುತ್ತಾರೆ ಕಲಾವಿದರಾದ ಪ್ರಕಾಶ್ ಸುವರ್ಣ.

ಕೋಲ, ನೇಮೋತ್ಸವ, ಜಾತ್ರೆ, ಉತ್ಸವಗಳ ಆಯೋಜನೆಗೂ ನಿರ್ಬಂಧವಿದೆ. ಚಂಡೆ, ಡೋಲು, ಚರ್ಮ ವಾದ್ಯ ನುಡಿಸುವವರು, ಜಾನಪದ ಕಲಾವಿದರು, ನೃತ್ಯ, ಹಾಸ್ಯ ಕಲಾವಿದರಿಗೂ ಕೆಲಸ ಇಲ್ಲದಂತಾಗಿದೆ. ನವರಾತ್ರಿಯ ವೇಳೆಗಾದರೂ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎನ್ನುತ್ತಾರೆ ಅವರು.

ಕೋವಿಡ್‌ನಿಂದಾಗಿ ಕಲಾರಂಗಕ್ಕೆ ಬಿದ್ದಷ್ಟು ಹೊಡೆತ ಯಾವ ರಂಗಕ್ಕೂ ಬಿದ್ದಿಲ್ಲ. ಕಲೆಯ ಮೇಲೆ ಅವಲಂಬಿತರಾಗಿರುವ ಎಲ್ಲರೂ ಬದುಕು ಕತ್ತಲಲ್ಲಿದೆ. ಇವರಿಗೆಲ್ಲ ಪ್ರದರ್ಶನಕ್ಕೆ ಅವಕಾಶ ಕೊಟ್ಟರೆ ಕಲಾವಿದರ ಮನೆಗಳಲ್ಲಿ ಒಲೆ ಉರಿಯಲಿದೆ. ಸಾಂಸ್ಕೃತಿಕ ರಂಗಕ್ಕೆ ಜೀವ ತುಂಬ ಕೆಲಸ ತುರ್ತಾಗಿ ಆಗಬೇಕು ಎನ್ನುತ್ತಾರೆ ರಂಗಕರ್ಮಿ ಹಾಗೂ ಚಿತ್ರನಟ ಪ್ರದೀಪ್‌ಚಂದ್ರ ಕುತ್ಪಾಡಿ.

ನಾಟಕ ಎಂದರೆ ಕಲಾವಿದರು ಮಾತ್ರವಲ್ಲ, ಲೈಟಿಂಗ್‌, ಮೈಕ್‌, ಕುರ್ಚಿ, ವೇದಿಕೆ ನಿರ್ಮಾಣ, ಮೇಕಪ್‌ ಹಾಕುವವರು, ಪರದೆ ಕಟ್ಟುವವರು, ಹೊರಗೆ ಚುರುಮುರಿ ಮಾರುವವರು, ಹೀಗೆ ಸಾವಿರಾರು ಮಂದಿ ಇದರ ವ್ಯಾಪ್ತಿಗೆ ಬರುತ್ತಾರೆ. ಇವರೆಲ್ಲರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕಲಾ ಸಂಸ್ಕೃತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದೊಂದೇ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ ಅವರು.

ಕೋವಿಡ್ ನಿಯಂತ್ರಣಕ್ಕೆ ನಿರ್ಬಂಧಗಳನ್ನು ವಿಧಿಸಿರುವುದು ಖಂಡಿತ ತಪ್ಪಲ್ಲ. ಕಡ್ಡಾಯವಾಗಿ 2 ಡೋಸ್‌ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದು, ಅಂತರ ಕಾಪಾಡುವುದು, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಹೀಗೆ ನಿರ್ಬಂಧಗಳನ್ನು ಹಾಕಲಿ. ಕೋವಿಡ್‌ ನಿಯಂತ್ರಣದಲ್ಲಿರುವಾಗ ಅತಂತ್ರವಾಗಿರುವ ಕಲಾವಿದರ ಬದುಕಿಗೆ ಸರ್ಕಾರ ಆಧಾರವಾಗಬೇಕು ಎನ್ನುತ್ತಾರೆ ಪ್ರದೀಪ್‌ಚಂದ್ರ ಕುತ್ಪಾಡಿ.

‘ಅವಕಾಶ ಕೊಡಿ’

ಕಲಾವಿದರ ಬಳಿ ಕೃಷಿ ಭೂಮಿ ಇಲ್ಲ. ಅನ್ಯವೃತ್ತಿ ಮಾಡಿಯೂ ಗೊತ್ತಿಲ್ಲ. ಜೀವನದಲ್ಲಿ ಸಂಪಾದಿಸಿರುವ ಆಸ್ತಿ ಕಲೆ ಮಾತ್ರ. ಪ್ರದರ್ಶನಕ್ಕೆ ವೇದಿಕೆ ಸಿಕ್ಕರೆ ದುಡಿಮೆ, ಇಲ್ಲವಾದರೆ ಬದುಕು ಸಾಗುವುದಿಲ್ಲ. ಬಹಳಷ್ಟು ವೃತ್ತಿ ಕಲಾವಿದರು ಭವಿಷ್ಯದ ಚಿಂತೆಯಿಂದ ಖಿನ್ನತೆಗೆ ಸಿಲುಕುತ್ತಿದ್ದಾರೆ. ಸರ್ಕಾರ ನವರಾತ್ರಿಯ ಸಂದರ್ಭದಲ್ಲಾದರೂ ಪ್ರದರ್ಶನಕ್ಕೆ ಅವಕಾಶ ಕೊಡಬೇಕು.

ಪ್ರದೀಪ್ ಚಂದ್ರ ಕುತ್ಪಾಡಿ, ನಟ ಹಾಗೂ ರಂಗಕರ್ಮಿ

ಕಲಾವಿದರು ಮಾತ್ರವಲ್ಲ, ವೇಷ–ಭೂಷಣ ಮಾರಾಟ ಮಾಡುವವರು, ಬಣ್ಣ ಕಲಾವಿದರು, ರಂಗ ಸಜ್ಜಿಕೆ ನಿರ್ಮಾಣ ಮಾಡುವವರು, ಸೌಂಡ್ಸ್‌, ಲೈಟಿಂಗ್ಸ್‌, ಶಾಮಿಯಾನ ಹಾಕುವವರು, ಕ್ಯಾಟರಿಂಗ್ ಹೀಗೆ ಯಕ್ಷಗಾನ ಅವಲಂಬಿತ ಎಲ್ಲ ಉದ್ಯಮಗಳ ಮೇಲೆ ಕೋವಿಡ್‌ ಕರಿನೆರಳು ಬಿದ್ದಿದೆ. ಶೀಘ್ರ ಕಲಾವಿದರ ಬದುಕಿನಲ್ಲಿ ಒಳ್ಳೆಯ ದಿನಗಳು ಬರಬೇಕು.

– ಮುರಳಿ ಕಡೇಕಾರ್‌, ಯಕ್ಷಗಾನ ಕಲಾವಿದರು

ಬಹಿರಂಗ ಪ್ರದರ್ಶನಕ್ಕೆ ನಿರ್ಬಂಧಗಳಿರುವ ಕಾರಣ ಕೆಲವರು ಆನ್‌ಲೈನ್ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಎಲ್ಲ ಕಲಾವಿದರಿಗೂ ಆನ್‌ಲೈನ್ ವೇದಿಕೆ ಕೈಗೆಟುಕುತ್ತಿಲ್ಲ. ಬಹಿರಂಗ ಪ್ರದರ್ಶನದಲ್ಲಿ ಸಿಗುವಷ್ಟು ತೃಪ್ತಿ ಎಲ್ಲಿಯೂ ಸಿಗುವುದಿಲ್ಲ. ರಾಜಕೀಯ ಸಮಾರಂಭಗಳಿಗೆ ಅವಕಾಶ ಕೊಟ್ಟಿರುವಾಗ, ಕಲಾ ಚಟುವಟಿಕೆಗಳಿಗೆ ನಿರಾಕರಿಸಿರುವುದು ಸರಿಯಲ್ಲ.

–ಪ್ರಸಾದ್ ಮೊಗೆಬೆಟ್ಟು, ಕಲಾವಿದರು

‘2 ವರ್ಷ ನಿರಂತರ ಹೊಡೆತ’

ಅಷ್ಟಮಿಯಿಂದ ಆರಂಭವಾಗಿ ಮೇತಿಂಗಳವರೆಗೂ ಕಲಾ ಪ್ರದರ್ಶನಗಳ ಸೀಸನ್ ಇರುತ್ತದೆ. ಕಳೆದ ಎರಡು ವರ್ಷಗಳಿಂದಲೂ ಇದೇ ಅವಧಿಯಲ್ಲಿ ಕೋವಿಡ್‌ ಹೆಚ್ಚಾಗಿದ್ದರಿಂದ ಲಾಕ್‌ಡೌನ್ ಜಾರಿಯಾಗಿ ಬಹಿರಂಗ ನಾಟಕಗಳ ಪ್ರದರ್ಶನ ಇರಲಿಲ್ಲ. ಚೌತಿಯಲ್ಲಿ 7 ದಿನ, ನವರಾತ್ರಿಯಲ್ಲಿ 9 ದಿನ ನಿರಂತರ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಈ ವರ್ಷ ಚೌತಿಗೆ ಅವಕಾಶ ಇಲ್ಲವಾದ್ದರಿಂದ ಸಮಸ್ಯೆಯಾಯಿತು. ಈಗ ನವರಾತ್ರಿಗಾದರೂ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದೇವೆ.

–ನಾಗರಾಜ್ ವರ್ಕಾಡಿ, ರಂಗಭೂಮಿ ಕಲಾವಿದ

ವೃತ್ತಿ ಕಲಾವಿದರು ತುಂಬಾ ಸಂಕಷ್ಟದಲ್ಲಿದ್ದಾರೆ. ಜೀವನ ನಿರ್ವಹಣೆ ಮಾಡಲಾಗುತ್ತಿಲ್ಲ. ಸಾಲ ಬೆನ್ನಿಗೇರಿದೆ. ಮಕ್ಕಳಿಗೆ ಶಿಕ್ಷಣ ಕೊಡಲಾಗುತ್ತಿಲ್ಲ. ದಿನನಿತ್ಯದ ಖರ್ಚು ಭರಿಸಲಾಗುತ್ತಿಲ್ಲ. ಹಿಂದೆಲ್ಲ ಚೌತಿ, ಶಾರದೋತ್ಸವ, ನವರಾತ್ರಿಯಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳು ಇರುತ್ತಿದ್ದವು. ಈಗ ಕೇಳುವವರು ಇಲ್ಲದಂತಾಗಿದೆ.

–ಗಣೇಶ್ ಗಂಗೊಳ್ಳಿ, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT