ಗುರುವಾರ , ಏಪ್ರಿಲ್ 15, 2021
26 °C
ಎಂಐಟಿಯಲ್ಲಿ ಕೊರೊನಾ ಹೆಚ್ಚಳ: 5,000 ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸೂಚನೆ

ಉಡುಪಿಗೆ ಮತ್ತೆ ಕಾಡುತ್ತಿದೆ ಮುಂಬೈ ಭೀತಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್‌ ಕೋವಿಡ್‌ ಹಾಟ್‌ಸ್ಪಾಟ್‌ ಆಗಿದೆಯೇ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರ್ನಾಲ್ಕು ದಿನಗಳಲ್ಲಿ ಎಂಐಟಿ ಕ್ಯಾಂಪಸ್‌ನಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ ಮೂರ್ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ದೃಢಪಟ್ಟ ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಎಂಐಟಿ ಪರಿಸರದಲ್ಲಿ. ಮಾರ್ಚ್‌ 16ರಂದು ದೃಢಪಟ್ಟ 32ರಲ್ಲಿ 25, ಮಾರ್ಚ್‌ 17ರಂದು ಪತ್ತೆಯಾದ 42ರಲ್ಲಿ 27 ಪ್ರಕರಣಗಳು ಎಂಐಟಿ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಿವೆ.

ಐಂಐಟಿ ವರ್ಷದ ಮೊದಲ ಕಂಟೈನ್‌ಮೆಂಟ್ ಝೋನ್‌:

ಸೋಂಕು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಇಡೀ ಎಂಐಟಿ ಕ್ಯಾಂಪಸ್‌ ಅನ್ನು ಕಂಟೈನ್‌ಮೆಂಟ್ ವಲಯವನ್ನಾಗಿಸಿದೆ. ಎಂಐಟಿ ಈ ವರ್ಷದ ಮೊದಲ ಕಂಟೈನ್‌ಮೆಂಟ್‌ ವಲಯವಾಗಿದ್ದು, ಸೋಂಕು ಇತರೆಡೆಗಳಿಗೆ ವ್ಯಾಪಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಡಳಿತ ಈಗಾಗಲೇ ಎಂಐಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಸಧ್ಯ ತರಗತಿಯಲ್ಲಿ ಪಾಠ ಮಾಡುವಂತಿಲ್ಲ. ಆನ್‌ಲೈನ್‌ನಲ್ಲಿ ಮಾತ್ರ ತರಗತಿಗಳು ನಡೆಯಬೇಕು. ಕಂಟೈನ್‌ಮೆಂಟ್ ವಲಯವಾಗಿರುವುದರಿಂದ ವಿದ್ಯಾರ್ಥಿಗಳು ಕ್ಯಾಂಪಸ್‌ ಬಿಟ್ಟು ಹೊರಬರುವಂತಿಲ್ಲ. 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್–19 ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕಂಟೈನ್‌ಮೆಂಟ್ ವಲಯವನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಆತಂಕ ಇಲ್ಲ. ಈಗಾಗಲೇ ಕೋವಿಡ್ ಪರೀಕ್ಷೆ ಮಾಡಿರುವ ವಿದ್ಯಾರ್ಥಿಗಳಿಗೆ 7 ದಿನಗಳ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕಾಡುತ್ತಿದೆ ಮುಂಬೈ ಭಯ:

ಕಳೆದ ವರ್ಷ ಕೊರೊನಾ ಆಘಾತ ನೀಡಿದ್ದ ಮುಂಬೈ ಈ ವರ್ಷವೂ ‘ಮಹಾ’ ಹೊಡೆತ ಕೊಡುವ ಆಂತಕ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಲಾಕ್‌ಡೌನ್ ಭೀತಿ ಎದುರಾಗಿದೆ. ಲಾಕ್‌ಡೌನ್‌ ಘೋಷಣೆಯಾದರೆ ಮುಂಬೈನಲ್ಲಿ ನೆಲೆಸಿರುವ ಉಡುಪಿ ಮೂಲದ ಸಾವಿರಾರು ಮಂದಿ ತವರಿಗೆ ಮರಳಲಿದ್ದು, ಜಿಲ್ಲೆಯಲ್ಲಿ ಮತ್ತೆ ಸೋಂಕು ಹೆಚ್ಚಾಗುವ ಆಂತಕ ಕಾಡುತ್ತಿದೆ.

ಸಧ್ಯ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರಿಗೆ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದ್ದರೂ, ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕೋವಿಡ್‌ ವರದಿ ಇಲ್ಲದೆ ಜಿಲ್ಲೆಗೆ ಬರುವವರು ಸಂಖ್ಯೆ ಹೆಚ್ಚಾಗಿದೆ.  ಕೂಡಲೇ ಜಿಲ್ಲಾಡಳಿತ ಕಠಿಣ ನಿರ್ಬಂಧಗಳನ್ನು ತೆಗೆದುಕೊಳ್ಳದಿದ್ದರೆ ಹಿಂದಿನ ಪರಿಸ್ಥಿತಿ ಮರುಕಳಿಸಲಿದೆ ಎಂದು ಆಂತಕ ವ್ಯಕ್ತಪಡಿಸುತ್ತಾರೆ ನಾಗರಿಕರಾದ ನಾಗರಾಜ್ ರಾವ್‌.

ವಾರದಲ್ಲಿ ದೃಢಪಟ್ಟ ಪ್ರಕರಣಗಳು

ದಿನಾಂಕ–ಸೋಂಕಿನ ಪ್ರಮಾಣ

ಮಾರ್ಚ್‌ 12–11

ಮಾರ್ಚ್‌ 13–13

ಮಾರ್ಚ್‌ 14–12

ಮಾರ್ಚ್‌–15–24

ಮಾರ್ಚ್‌–16–32

ಮಾರ್ಚ್‌–17–42

ಮಾರ್ಚ್‌–18–38

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು