ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತನ ಸಂಪರ್ಕದಲ್ಲಿದ್ದವರ ಪತ್ತೆ: ನಿಗಾ

ಗುರುವಾರ 16 ಶಂಕಿತರು ಆಸ್ಪತ್ರೆಗೆ ದಾಖಲು: 336 ಮಂದಿ ಹೋಂ ಕ್ವಾರಂಟೈನ್‌
Last Updated 26 ಮಾರ್ಚ್ 2020, 16:25 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮೊದಲ ಕೋವಿಡ್‌ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದಂತೆ ಜಿಲ್ಲಾಡಳಿತ ಸೋಂಕಿತನ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆಹಾಕಲು ಬೆನ್ನುಬಿದ್ದಿದೆ.

ಸೋಂಕಿತ ವ್ಯಕ್ತಿಮಣಿಪಾಲದ ಕೆಎಂಸಿ ನೌಕರನಾಗಿದ್ದು, ದುಬೈನಿಂದ ಬಂದ ದಿನವೇ ರಜೆ ಕೊಟ್ಟು ಮನೆಗೆ ಕಳುಹಿಸಲಾಗಿತ್ತು. ಪತ್ನಿ ಹಾಗೂ ಮಗು ತವರು ಮನೆಗೆ ಹೋಗಿದ್ದರಿಂದ ಒಬ್ಬನೇ ಮನೆಯಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಸೋಂಕಿತ ವ್ಯಕ್ತಿ ದುಬೈನಿಂದ ಮಂಗಳೂರಿಗೆ ಬಂದಿಳಿದ ಬಳಿಕ ಅಲ್ಲಿಂದ ಟ್ಯಾಕ್ಸಿಯಲ್ಲಿ ಉಡುಪಿಗೆ ಬಂದಿದ್ದು, ಕಾರು ಚಾಲಕನನ್ನು ಪತ್ತೆಹಚ್ಚಿ ಗೃಹ ನಿಗಾದಲ್ಲಿಡಲಾಗಿದೆ. ಸೋಂಕಿತ ನಾಲ್ವರ ಜತೆ ಸಂಪರ್ಕ ಹೊಂದಿದ್ದು, ಅವರ ಮಾಹಿತಿಯನ್ನೂ ಪಡೆದು ಎಚ್ಚರ ವಹಿಸಲಾಗಿದೆ.

ಸೋಂಕಿತ ಮಣಿಪಾಲದ ಆಸುಪಾಸಿನಲ್ಲಿ ಎಲ್ಲೆಲ್ಲಿ ಸುತ್ತಾಡಿದ್ದಾನೆ, ಯಾರನ್ನೆಲ್ಲ ಭೇಟಿಯಾಗಿದ್ದಾನೆ, ಮನೆಗೆ ಯಾರೆಲ್ಲ ಬಂದಿದ್ದರು ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಸೋಂಕಿತನ ಮೊಬೈಲ್‌ ಕರೆಗಳ ಮಾಹಿತಿ ಪಡೆದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಸಾರ್ವಜನಿಕರಲ್ಲಿ ಆತಂಕ

ಜಿಲ್ಲೆಯಲ್ಲಿ ಮೊದಲ ಕೋವಿಡ್ ಸೋಂಕು ಪತ್ತೆಯಾಗುತ್ತಿದ್ದಂತೆ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಮನೆಯಿಂದ ಹೊರಬರಲೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗುರುವಾರ 16 ಶಂಕಿತರು ಆಸ್ಪತ್ರೆಗೆ

ಗುರುವಾರವೂ ಶಂಕಿತ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ 16 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 103 ಜನರ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 80 ವರದಿಗಳು ಕೈಸೇರಿದ್ದು, ಒಂದು ಮಾತ್ರ ಪಾಸಿಟಿವ್, 79 ನೆಗೆಟಿವ್‌ ಬಂದಿದೆ. 23 ವರದಿಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

336 ಮಂದಿ ಹೋಂ ಕ್ವಾರಂಟೈನ್‌

ಇದುವರೆಗೂ 1406 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಗುರುವಾರ 336 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. 56 ಮಂದಿ 24 ದಿನಗಳ ಗೃಹ ನಿಗಾ ಅವಧಿ ಪೂರೈಸಿದ್ದಾರೆ.19 ಜನರು ಶಂಕಿತ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿದೇಶದಿಂದ ಬಂದವರು 1000ಕ್ಕೂ ಅಧಿಕ

ಉಡುಪಿ ಜಿಲ್ಲೆಗೆ ವಿದೇಶಗಳಿಂದ 1000ಕ್ಕೂ ಹೆಚ್ಚು ಮಂದಿ ಬಂದಿದ್ದು, ಎಲ್ಲರೂ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಅಧಿಕಾರಿಗಳು ಈಗಾಗಲೇ ಗೃಹ ನಿಗಾದಲ್ಲಿರುವವರ ಮನೆಗಳ ಮುಂದೆ ನೋಟಿಸ್‌ಗಳನ್ನು ಅಂಟಿಸಿದ್ದು, ಅಕ್ಕಪಕ್ಕದವರ ಮನೆಗೆ ನೋಟಿಸ್‌ ನೀಡಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದವರು ಮನೆಯಿಂದ ಹೊರಬಂದರೆ 9480242600 ನಂಬರ್‌ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಗೃಹ ನಿಗಾ ಅವಧಿ ಮುಗಿಯುವವರೆಗು ಹೊರಗಡೆ ಬರುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT