ಶುಕ್ರವಾರ, ಜುಲೈ 30, 2021
27 °C

ಉಡುಪಿ ಜಿಲ್ಲಾ ಆಸ್ಪತ್ರೆ 2 ದಿನ ಬಂದ್‌: ವೈದ್ಯರು ಸೇರಿ 18 ಮಂದಿಗೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ಗುರುವಾರ ಶತಕ ದಾಟಿದೆ. ಉಡುಪಿ ತಾಲ್ಲೂಕಿನ 36, ಕುಂದಾಪುರದ 62, ಕಾರ್ಕಳ ತಾಲ್ಲೂಕಿನಲ್ಲಿ 11 ಸೇರಿ 109 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ 61 ಪುರುಷರು, 40 ಮಹಿಳೆಯರು, 8 ಮಕ್ಕಳು ಸೇರಿದ್ದಾರೆ. ಮುಂಬೈನಿಂದ ಉಡುಪಿಗೆ ಬಂದಿದ್ದ 11, ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿರುವ 15, ದಾವಣಗೆರೆ ಪ್ರಯಾಣ ಮಾಡಿದ್ದ ಇಬ್ಬರು, ಹೈದರಾಬಾದ್‌ ಹಾಗೂ ದುಬೈನಿಂದ ಬಂದಿದ್ದ ಇಬ್ಬರಲ್ಲಿ ಸೋಕು ಕಾಣಿಸಿಕೊಂಡಿದೆ.

ಶೀತಜ್ವರದ ಲಕ್ಷಣಗಳಿದ್ದ 17 ಜನರಲ್ಲಿ, ತೀವ್ರ ಉಸಿರಾಟದ ಸಮಸ್ಯೆ ಇದ್ದ ಇಬ್ಬರಲ್ಲಿ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 49 ಮಂದಿಯಲ್ಲಿ ಸೋಂಕು ದೃಢಫಟ್ಟಿದೆ. 

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 537 ಜನರ ಗಂಟಲದ್ರವದ ಮಾದರಿಯನ್ನು ಗುರುವಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 594 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳು ಕಂಡುಬಂದ 12 ಜನರನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ.

80 ಮಂದಿ ಗುಣಮುಖ:

ಗುರುವಾರ 80 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾದರು. ಜಿಲ್ಲೆಯಲ್ಲಿ ಇದುವರೆಗೂ 1462 ಜನರು ಗುಣಮುಖರಾಗಿದ್ದಾರೆ. ಸದ್ಯ 428 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ಆಸ್ಪತ್ರೆ 2 ದಿನ ಬಂದ್‌:

ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇದುವರೆಗೂ ಮೂವರು ವೈದ್ಯರು, ಒಬ್ಬರು ಸ್ಟಾಫ್‌ ನರ್ಸ್‌, ಸರ್ಜರಿ ವಾರ್ಡ್‌ನಲ್ಲಿದ್ದ 10 ರೋಗಿಗಳಿಗೆ ಹಾಗೂ ನಾಲ್ವರು ಗ್ರೂಪ್‌ ‘ಡಿ’ ನೌಕರರಿಗೆ ಸೋಂಕು ಕಾಣಿಸಿಕೊಂಡಿದೆ.

ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಜರಿ ವಾರ್ಡ್‌ ಹಾಗೂ ಒಪಿಡಿ ಬಂದ್‌ ಮಾಡಿ ಆಸ್ಪತ್ರೆಯನ್ನು ಮುಚ್ಚಲಾಗಿದೆ. ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, 2 ದಿನಗಳ ಬಳಿಕ ತೆರೆಯಲಾಗುವುದು. ಆಸ್ಪತ್ರೆಯ ಎಲ್ಲ ವೈದ್ಯರು, ನರ್ಸ್‌ಗಳು, ಸಿಬ್ಬಂದಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದರು.

ಸೋಂಕು ಹರಡಿದ್ದು ಹೇಗೆ?

ಈಚೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಯನ್ನು ಸರ್ಜರಿ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಆ ವ್ಯಕ್ತಿಗೆ ಸೋಂಕು ಇರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಪರಿಣಾಮ ಸೋಂಕಿತನ ಸಂಪರ್ಕಕ್ಕೆ ಬಂದ ವಾರ್ಡ್‌ನಲ್ಲಿದ್ದ ಇತರೆ ರೋಗಿಗಳಿಗೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‌ ಹಾಗೂ ಸಿಬ್ಬಂದಿಗೂ ಸೋಂಕು ಹರಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು