ಭಾನುವಾರ, ಜುಲೈ 3, 2022
23 °C
ದೇಸಿ ಗೋಪಾಲಕರ, ಕೃಷಿಕರ ಸಮ್ಮೇಳನ ಉದ್ಘಾಟಿಸಿದ ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್‌

ಗೋವುಗಳ ರಕ್ಷಣೆಗೆ ಪಶು ಸಂಜೀವಿನಿ ಆಂಬುಲೆನ್ಸ್‌: ಸಚಿವ ಪ್ರಭು ಚವ್ಹಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಗೋವುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಅನಾರೋಗ್ಯ ಪೀಡಿತ ಹಾಗೂ ಅವಘಡಗಳಲ್ಲಿ ಗಂಭೀರವಾಗಿ ಗಾಯಗೊಂಡ ಗೋವುಗಳಿಗೆ ಶುಶ್ರೂಷೆ ನೀಡಲು ಪ್ರತಿ ತಾಲ್ಲೂಕಿಗೆ ಪಶು ಸಂಜೀವಿನಿ ಆಂಬುಲೆನ್ಸ್‌ ನೀಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.

ಕೃಷ್ಣ ಮಠದ ರಾಜಾಂಗಣದಲ್ಲಿ ವಿಶ್ವಾರ್ಪಣಂ ಕಾರ್ಯಕ್ರಮದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದೇಸಿ ಗೋಪಾಲಕರ, ಕೃಷಿಕರ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪಶು ಸಂಜೀವಿನಿ ಆಂಬುಲೆನ್ಸ್‌ ಟೆಂಡರ್ ಮುಗಿದಿದ್ದು, 275 ಆಂಬುಲೆನ್ಸ್‌ಗಳನ್ನು ಖರೀದಿಸಲಾಗುತ್ತಿದೆ. ಆಂಬುಲೆನ್ಸ್‌ನಲ್ಲಿ ವೈದ್ಯರು ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳು ಇರಲಿವೆ. 1962 ನಂಬರ್‌ಗೆ ಕರೆ ಮಾಡಿದರೆ ಆಂಬುಲೆನ್ಸ್‌ ಸ್ಥಳಕ್ಕೆ ಬಂದು ಗೋವುಗಳಿಗೆ ಚಿಕಿತ್ಸೆ ನೀಡಲಿದೆ ಎಂದರು.

ಉತ್ತರ ಪ್ರದೇಶ ಹಾಗೂ ಗುಜರಾತ್‍ನಲ್ಲಿ ಅಧ್ಯಯನ ನಡೆಸಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು. ಕಾಯ್ದೆ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿದ್ದು, ತೀರ್ಪು ಸರ್ಕಾರದ ಪರವಾಗಿ ಬರುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಬಳಿಕ 10,000ಕ್ಕೂ ಹೆಚ್ಚು ಗೋವುಗಳ ರಕ್ಷಣೆಯಾಗಿದೆ. 500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ‍ಪರವಾಗಿ ತೀರ್ಪು ಬಂದರೆ ಆರೋಪಿಗಳಿಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಿಸಲಾಗುವುದು. ಕಾಯ್ದೆಯಲ್ಲಿ ಗರಿಷ್ಠ 7 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ ಎಂದರು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಯುವ ಸಮುದಾಯ ಗೋವುಗಳನ್ನು ಸಂಪತ್ತು ಎಂದು ಅರಿಯಬೇಕು ಎಂದರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಜಿ. ಶಂಕರ್, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು