ಮಂಗಳವಾರ, ಜನವರಿ 25, 2022
26 °C
ಸಿಪಿಐ(ಎಂ) 7ನೇ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಕರೆ

‘ಕೋಮವಾದ ನಾಶಮಾಡಿ ಕೋಮು ಸೌಹಾರ್ದ ಉಳಿಸೋಣ’: ವಸಂತ ಆಚಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೇಂದ್ರದ ಬಿಜೆಪಿ ಸರ್ಕಾರ ಆರ್‌ಎಸ್‌ಎಸ್‌ನ ಅಪಾಯಕಾರಿ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದ್ದು, ದೇಶದ ಐಕ್ಯತೆಗೆ ಧಕ್ಕೆ ತರುವ ಸಿದ್ಧಾಂತಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಸಿಪಿಐ(ಎಂ) ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಕರೆ ನೀಡಿದರು.

ನಗರದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) 7ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ನೋಟು ರದ್ಧತಿ, ಸಿಎಎ, ಎನ್‌ಆರ್‌ಸಿ, ಕೃಷಿ ಕಾಯಿದೆ, ರಾಷ್ಟ್ರೀಯ ಶಿಕ್ಷಣ ನೀತಿಗಳು ಆರ್‌ಎಸ್‌ಎಸ್‌ನ ಸಿದ್ಧಾಂತದ ಭಾಗವಾಗಿದೆ. ದೇಶದ ಎಲ್ಲ ಸಮಸ್ಯೆಗಳಿಗೆ ಮಾರ್ಕ್ಸ್‌ವಾದದಿಂದ ಪರಿಹಾರ ಸಾಧ್ಯವಿದ್ದು, ಸಿಪಿಐ(ಎಂ) ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕರಾವಳಿಯ ಕೋಲ, ಜಾತ್ರೆ, ಯಕ್ಷಗಾನ, ಶಾಲಾ ಕಾಲೇಜು ಆವರಣಗಳು ಸೇರಿದಂತೆ ಎಲ್ಲವೂ ಕೇಸರಿಕರಣ ಮಾಡಲಾಗುತ್ತಿದೆ. ಈ ಅಪಾಯ ಅರಿತು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಕೋಮುವಾದ ನಾಶಮಾಡಿ, ಕೋಮು ಸೌಹಾರ್ದತೆ ಉಳಿಸುವ ಕಾರ್ಯ ಮಾಡಬೇಕು ಎಂದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ‘ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕೆ ಪರ್ಯಾಯವಾಗಿ ಸಿಪಿಐ(ಎಂ) ಪಕ್ಷವನ್ನು ಕಟ್ಟಬೇಕಿದ್ದು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದರು. ಇದೇವೇಳೆ ವಾರ್ಷಿಕ ವರದಿ ಮಂಡಿಸಿದರು. 

ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅದಮಾರು ಶ್ರೀಪತಿ ಆಚಾರ್ಯ, ಕಾರ್ಯದರ್ಶಿ ಶಶಿಧರ ಗೊಲ್ಲ, ಕೋಶಾಧಿಕಾರಿ ಕವಿರಾಜ, ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ, ಸಿಪಿಎಂ ಮುಖಂಡರಾದ ಪಿ.ವಿಶ್ವನಾಥ ರೈ, ಎಚ್.ನರಸಿಂಹ, ಮಹಾಬಲ ವಡೇರಹೋಬಳಿ ಉಪಸ್ಥಿತರಿದ್ದರು.

ಸಿಪಿಐಎಂ ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ್ ಕೋಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಕೆ.ಎಂ.ಮಾರ್ಗ, ಜೋಡು ರಸ್ತೆ, ಅಜ್ಜರಕಾಡು, ಬ್ರಹ್ಮಗಿರಿ ಮೂಲಕ ಲಯನ್ಸ್ ಭವನದಲ್ಲಿ ಸಮಾಪನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.