‘ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಒಟ್ಟಾಗೋಣ’

7
ಪೊಲೀಸ್ ಇಲಾಖೆ, ಮಾಧ್ಯಮ ಸಹಯೋಗದಲ್ಲಿ ಮಾದಕ ವ್ಯಸನ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮ

‘ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಒಟ್ಟಾಗೋಣ’

Published:
Updated:
Deccan Herald

ಉಡುಪಿ: ಯುವಕರಲ್ಲಿ ಮಾದಕ ವ್ಯಸನಗಳ ಬಗ್ಗೆ ಆಕರ್ಷಣೆ ಹೆಚ್ಚುತ್ತಿದ್ದು, ದುಶ್ಚಟಗಳನ್ನು ನಿರ್ಮೂಲನೆ ಮಾಡಲು ಮಾಧ್ಯಮ ಹಾಗೂ ಪೊಲೀಸ್‌ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದರು. 

ಜಿಲ್ಲಾ ಪೊಲೀಸ್‌ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ‘ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಮತ್ತು ಪೋಲಿಸ್ ಇಲಾಖೆಯ ಜವಾಬ್ದಾರಿ’ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ಮಾದಕವಸ್ತುಗಳನ್ನು ಸೇವನೆ ಮಾಡುವವರನ್ನು ಹಿಡಿಯುವುದಕ್ಕಿಂತ, ಸರಬರಾಜು ಮಾಡುವವರ ಜಾಲ ಪತ್ತೆ ಹಚ್ಚುವುದು ಬಹಳ ಮುಖ್ಯ. ಹಾಗೆಯೇ, ಮಾದಕವಸ್ತುಗಳ ಸೇವನೆಯ ಅಪಾಯ ಹಾಗೂ ಕಾನೂನಿನಡಿ ವಿಧಿಸಲಾಗುವ ಶಿಕ್ಷೆಯ ಕುರಿತು ಸಾರ್ವಜನಿಕರನ್ನು ಎಚ್ಚರಿಸುವ ಕಾರ್ಯವನ್ನು ಮಾಧ್ಯಮಗಳು ಮಾಡಬೇಕು ಎಂದು ಸಲಹೆ ನೀಡಿದರು.

ಆರಂಭದಲ್ಲಿ ವ್ಯಸನಗಳ ಬಗ್ಗೆ ಹೆಚ್ಚು ಕುತೂಹಲ ಇರುತ್ತದೆ. ಒತ್ತಡವನ್ನು ಶಮನಗೊಳಿಸಲು, ಸ್ನೇಹಿತರ ಒತ್ತಾಯಕ್ಕೆ ಮಣಿದು, ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ಮಾದಕ ದ್ರವ್ಯಗಳನ್ನು ಉಪಯೋಗಿಸಲು ಆರಂಭಿಸುತ್ತಾರೆ. ಕೊನೆಗೆ, ಅದರಿಂದ ಬಿಟ್ಟು ಹೊರಬರಲಾಗದ ಹಂತವನ್ನು ತಲುಪುತ್ತಾರೆ ಎಂದು ದುಷ್ಪರಿಣಾಮಗಳು ಕುರಿತು ಭಂಡಾರಿ ಹೇಳಿದರು.

ಡ್ರಗ್ಸ್‌ನ ಬಳಕೆಯಿಂದ ಮಿದುಳಿನ ಮೇಲೆ ಒತ್ತಡ ಉಂಟಾಗಿ, ಮಾದಕ ವಸ್ತುಗಳನ್ನು ಹೆಚ್ಚಾಗಿ ಬಯಸುವಂತಾಗುತ್ತದೆ. ಸೇವನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಕೊನೆಗೆ ವ್ಯಸನಿಗಳು ಮನೋಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

ಡ್ರಗ್ಸ್‌ ಸೇವನೆಯಿಂದ ಮಿದುಳಿನ ನರಗಳಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಇದು ಮಿದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ. ಡೋಪಮೈನ್ ಬಿಡುಗಡೆಯಾದಾಗ, ಒಂದುರೀತಿಯಲ್ಲಿ ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆ ಮತ್ತೆ ಆ ಸಂತೋಷವನ್ನು ಬಯಸಿ, ಮಾದಕದ್ರವ್ಯವನ್ನು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ ಎಂದರು.

ಡ್ರಗ್ ಸೇವನೆಯು ಮಿದುಳಿನ ಕಾರ್ಯಕ್ಷಮತೆಗೆ ಹಾನಿಮಾಡುತ್ತದೆ. ಅಧ್ಯಯನಗಳ ಪ್ರಕಾರ ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಸೇರಿದಂತೆ ಮನುಷ್ಯನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ವ್ಯಸನಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಅಥವಾ ಮಾನಸಿಕ ಅಸ್ವಸ್ಥತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅವರು ಎಚ್ಚರಿಸಿದರು. 

ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಮತ್ತು ಪೋಲಿಸ್ ಇಲಾಖೆಯ ಮೇಲೆ ಹೆಚ್ಚು ಜವಾಬ್ದಾರಿಯಿದ್ದು, ಅದನ್ನು ನಿಭಾಯಿಸಬೇಕು ಎಂದರು.

ಉಪನ್ಯಾಸ ಕಾರ್ಯಕ್ರಮದ ನಂತರ ಪತ್ರಕರ್ತರು ಹಾಗೂ ಪೊಲೀಸರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !