ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್ ಸರ್ಕಿಟ್: ಸೊತ್ತು ನಾಶ

Last Updated 13 ಆಗಸ್ಟ್ 2022, 2:51 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕಾಪು (ಪಡುಬಿದ್ರಿ): ಪೊಲಿಪು ಸರ್ಕಲ್ ಬಳಿಯ ಮನೆಯೊಂದರ ಫ್ರಿಜ್ ಶಾರ್ಟ್ ಸರ್ಕಿಟ್‌ನಿಂದ ಮನೆಯ ಸೊತ್ತುಗಳು ಭಸ್ಮಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಗುರುರಾಜ್ ಅವರು ದಿನೇಶ್ ಪೂಜಾರಿ ಅವರ ವಸತಿ ಸಂಕೀರ್ಣದ ಮೇಲಂತಸ್ತಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಪೇಟೆಗೆ ಸಾಮಾನು ಖರೀದಿಸಲು ತೆರಳಿದ್ದರು. ಆ ಸಂದರ್ಭ ಅಗ್ನಿ ಅವಘಡ ಸಂಭವಿಸಿದ್ದು, ಮನೆಯ ಬಟ್ಟೆ ಬರೆ ಸಹಿತ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳೀಯರು ಹಾಗೂ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹಾಡಹಗಲೇ ಕಳ್ಳತನಕ್ಕೆ ಯತ್ನ: ದಂಪತಿ ಬಂಧನ

ಬೈಂದೂರು: ತಾಲ್ಲೂಕಿನ ಮರವಂತೆ ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಹಾಡಹಗಲೇ ಯತ್ನಿಸಿದ್ದ ದಂಪತಿಯನ್ನು ಪೋಲೀಸರು ಬಂಧಿಸಿದ್ದಾರೆ. ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ 17 ವರ್ಷ ವಯಸ್ಸಿನ ಆತನ ಪತ್ನಿ ಭದ್ರಾವತಿಯ ಬಿಂದು ಬಂಧಿತರು.

ವರಾಹ ಸ್ವಾಮಿ ದೇವಸ್ಥಾನದ ಸಿಸಿ ಟಿವಿ ಕ್ಯಾಮೆರಾದಲ್ಲಿ ಕಳ್ಳತನ ಯತ್ನದ ದೃಶ್ಯ ಸೆರೆಯಾಗಿದ್ದು, ಅದನ್ನು ಆಧರಿಸಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ ಎಂ. ನಾಯಕ್ ಗಂಗೊಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳ್ಳರ ಜಾಡು ಹಿಡಿದ ಪೋಲೀಸರು ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿಯವರ ಮಾರ್ಗದರ್ಶನ ಬಂಧಿಸಲಾಗಿದೆ.

ಆರೋಪಿಗಳ ವಿಚಾರಣೆಯನ್ನು ನಡೆಸಿದಾಗ ಬೈಂದೂರು ಭಾಗದ ಹಲವಾರು ದೇವಸ್ಥಾನಗಳಲ್ಲಿ ಕಳೆದ ಮೂರು ತಿಂಗಳಿನಿಂದ ನಡೆದ ಕಳ್ಳತನ ಪ್ರಕರಣಗಳನ್ನು ಈತನೇ ಎಸಗಿರುವುದು ತಿಳಿದುಬಂದಿದೆ. ತಗ್ಗರ್ಸೆ ಚಂದಣದ ಸೋಮಲಿಂಗೇಶ್ವರದ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗೂರು ಸಿಂಗಾರ ಗರಡಿ, ಹೊಸೂರು ಕಾನಬೇರು ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಕಳವುಗೈದು ನಗನಾಣ್ಯವನ್ನು ಕದ್ದಿರುವುದು ಬೆಳಕಿಗೆ ಬಂದಿದೆ.

ಬೈಕ್‌ನಿಂದ ಬಿದ್ದು ಶಿಕ್ಷಕಿ ಸಾವು

ಕುಂದಾಪುರ: ಬೈಕಿನಲ್ಲಿ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯಲ್ಲಿ ದನ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಹೆಮ್ಮಾಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಬಿಕಾ (32) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಪತಿ ಶ್ರೀಕಾಂತ ಜತೆ ಮುದೂರಿನಿಂದ ಬೈಕಿನಲ್ಲಿ ಶಾಲೆಗೆಂದು ಹೊರಟಿದ್ದರು. ಈ ವೇಳೆ ದನ ಅಡ್ಡ ಬಂದು ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ. ಅಂಬಿಕಾ ಅವರಿಗೆ ಒಂದೂವರೆ ವರ್ಷದ ಪುಟ್ಟಹೆಣ್ಣು ಮಗುವಿದೆ.

ವಿದ್ಯಾರ್ಥಿಗಳ ಕಣ್ಣೀರ ಕಂಬನಿ :

ಅಂಬಿಕಾ ವಿದ್ಯಾರ್ಥಿಗಳಿಗೆ ನೆಚ್ಚಿನ ಶಿಕ್ಷಕಿಯಾಗಿದ್ದರು. ತಮ್ಮ ನೆಚ್ಚಿನ ಟೀಚರ್ ಮೃತಪಟ್ಟ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ವಿದ್ಯಾರ್ಥಿಗಳು ಕಣ್ಣೀರಧಾರೆ ಹರಿಸಿದರು.

ಕುಂಭಾಶಿ: ಚಿನ್ನ ಕದ್ದ ಆರೋಪಿ ಬಂಧನ

ಕುಂದಾಪುರ: ಇಲ್ಲಿಗೆ ಸಮೀಪದ ಕುಂಭಾಶಿಯಲ್ಲಿ ಮನೆಯವರೆಲ್ಲ ತೀರ್ಥಯಾತ್ರೆಗೆ ತೆರಳಿದ್ದ ಸಂದರ್ಭ ಮನೆಯ ಹಿಂಬದಿಯ ಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾದ ಕಳ್ಳನನ್ನು ಕುಂದಾಪುರ ಪೊಲೀಸರು ಸೆರೆ ಹಿಡಿದ್ದಿದ್ದಾರೆ.

ಮರವಂತೆ ನಿವಾಸಿ, ಪ್ರಸ್ತುತ ಕುಂಭಾಶಿ ವಿನಾಯಕ ನಗರಲ್ಲಿರುವ ಸುಭಾಶ್ಚಂದ್ರ ಆಚಾರ್ಯ (40) ಆರೋಪಿ. ಈತನಿಂದ 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್‌, 12 ಗ್ರಾಂ ತೂಕದ ಪೆಂಡೆಂಟ್ ಇರುವ ರೋಪ್ ಚೈನ್, 4 ಗ್ರಾಂ, 3 ಗ್ರಾಂ ತೂಕದ ಚಿನ್ನದ ಉಂಗುರ, ₹1, 610 ನಗದನ್ನು ವಶಪಡಿಕೊಳ್ಳಲಾಗಿದೆ.

ಹೆರ್ಗ ಗೋಳಿಕಟ್ಟೆಯಲ್ಲಿ ನಾಯಿ ಮೇಲೆ ಚಿರತೆ ದಾಳಿ

ಉಡುಪಿ: ಹೆರ್ಗ ಗ್ರಾಮದ ಗೋಳಿಕಟ್ಟೆಯ ಬಾಲಚಂದ್ರ ಕೆದ್ಲಾಯ ಅವರ ಮನೆಯ ಅಂಗಳದಲ್ಲಿ ಕಟ್ಟಿದ್ದ ನಾಯಿಯ ಮೇಲೆ ಚಿರತೆ ದಾಳಿ ಮಾಡಿದ್ದು, ಈ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ
ಸೆರೆಯಾಗಿದೆ.
ಮಧ್ಯರಾತ್ರಿ ವೇಳೆ ಆಹಾರ ಅರಸಿ ಬಂದ ಚಿರತೆ ಮನೆಯ ಮುಂದೆ ಕಟ್ಟಿಹಾಕಿದ್ದ ನಾಯಿ ಮೇಲೆ ಎರಗಿ ಎಳೆದೊಯ್ಯಲು ಯತ್ನಿಸಿದೆ. ಆದರೆ, ನಾಯಿಗೆ ಕಟ್ಟಲಾಗಿದ್ದ ಚೈನ್ ಬಿಗಿಯಾಗಿದ್ದ
ಕಾರಣ ಎಳೆದೊಯ್ಯಲು ಸಾದ್ಯವಾಗಲಿಲ್ಲ. ಮನೆಯ ಮಾಲೀಕರು ಎಚ್ಚರವಾಗಿದ್ದರಿಂದ ಚಿರತೆ ನಾಯಿಯನ್ನು ಬಿಟ್ಟು ಪರಾರಿಯಾಗಿದೆ.
ಹಿಂದೆಯೂ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಕೋಳಿ, ನಾಯಿಗಳನ್ನು ಹೊತ್ತೊಯ್ದಿದೆ. ಚಿರತೆ ದಾಳಿಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT