ಶನಿವಾರ, ನವೆಂಬರ್ 23, 2019
17 °C

ಸಕಾಲದಡಿ ಸೇವೆ ಕೊಡದಿದ್ದರೆ ಕ್ರಿಮಿನಲ್ ಮೊಕದ್ದಮೆ: ಹೆಚ್ಚುವರಿ ಡಿಸಿ ಎಚ್ಚರಿಕೆ

Published:
Updated:
Prajavani

ಉಡುಪಿ: ಸಕಾಲ ಯೋಜನೆಯಡಿ ಬರುವ ಸೇವೆಗಳನ್ನು ಸಕಾಲ ತಂತ್ರಾಂಶದ ಮೂಲಕವೇ ಸ್ವೀಕರಿಸಿ, ಸಾರ್ವಜನಿಕರಿಗೆ ಒದಗಿಸಬೇಕು. ಸಕಾಲ ತಂತ್ರಾಂಶವನ್ನು ಬಿಟ್ಟು ನೇರವಾಗಿ ಅರ್ಜಿ ಸ್ವೀಕರಿಸಿದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಎಚ್ಚರಿಕೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಕಾಲ ಸೇವೆಗಳ ಅಧಿನಿಯಮದ ಸಮರ್ಪಕ ಅನುಷ್ಠಾನ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಸಾರ್ವಜನಿಕರಿಗೆ ಶೀಘ್ರವಾಗಿ ಸೇವೆಗಳು ದೊರೆಯಲಿ ಎಂಬ ಉದ್ದೇಶದಿಂದ ಸಕಾಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಸಾರ್ವಜನಿಕರು ಪಡೆಯುವ ದಾಖಲೆಗಳಿಗೆ ಮಾತ್ರ ಅಧಿಕೃತ ಮಾನ್ಯತೆ ಇರುತ್ತದೆ. ಹಾಗಾಗಿ, ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು. ಸಾರ್ವಜನಿಕರಿಗೆ ಸಕಾಲ ತಂತ್ರಾಂಶದ ಮೂಲಕವೇ ಸೇವೆಗಳನ್ನು ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಕಾಲ ಸೇವೆ ನೀಡುವಲ್ಲಿ ಜಿಲ್ಲಾಡಳಿತದ ಸೂಚನೆಯನ್ನು ಉಲ್ಲಂಘಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಡಿಸಿ ಎಚ್ಚರಿಕೆ ನೀಡಿದರು.

ಸಕಾಲ ಯೋಜನೆಯ ವ್ಯಾಪ್ತಿಯಲ್ಲಿ ಬಹುತೇಕ ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಗಳು ಲಭ್ಯವಿದೆ. ಸಕಾಲ ತಂತ್ರಾಂಶದ ಮೂಲಕ ಸೇವೆ ಕೊಡದಿದ್ದರೆ ಅಂತಹ ಇಲಾಖೆಗಳ ಪ್ರಗತಿ ಶೂನ್ಯ ದಾಖಲಾಗಲಿದೆ. ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ 98 ಗ್ರಾಮ ಪಂಚಾಯತ್‌ಗಳು ಸಕಾಲ ತಂತ್ರಾಂಶದ ಮೂಲಕ ಸೇವೆ ನೀಡದ ಕಾರಣ ಶೂನ್ಯ ಪ್ರಗತಿಯಾಗಿದೆ. ನಿಯಮ ಉಲ್ಲಂಘಿಸಿದ 98 ಗ್ರಾಮ ಪಂಚಾಯತ್‌ಗಳಿಗೆ ನೋಟೀಸ್ ನೀಡಲಾಗಿದೆ ಎಂದರು.

ರಾಜ್ಯ ಮಟ್ಟದಲ್ಲಿ ಯಾವುದೇ ಯೋಜನೆಯ ಪ್ರಗತಿ ಪರಿಶೀಲನೆ ನಡೆಯುವಾಗ ಉಡುಪಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿರುತ್ತದೆ. ಆದರೆ, ಸಕಾಲ ಅರ್ಜಿ ಪ್ರಗತಿಯಲ್ಲಿ ಕೆಲವು ತಿಂಗಳುಗಳಿಂದ ಅಗ್ರಸ್ಥಾನ ಪಡೆಯುವಲ್ಲಿ ಜಿಲ್ಲೆ ವಿಫಲವಾಗಿರುವುದು ಬೇಸರದ ಸಂಗತಿ ಎಂದು ಸದಾಶಿವ ಪ್ರಭು ತಿಳಿಸಿದರು.

ಸಕಾಲ ಯೋಜನೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿದ ನಂತರ ಅರ್ಜಿಯ ಗಡುವು ಮುಗಿಯುವವರೆಗೂ ಕಾಯದೆ ಶೀಘ್ರ ಸೇವೆಗಳನ್ನು ಒದಗಿಸಬೇಕು. ಇದರಿಂದ ಜಿಲ್ಲೆಯ ರ‍್ಯಾಂಕಿಂಗ್ ಮೇಲೇರಲಿದೆ. ಉಡುಪಿ ಸಕಾಲ ಯೋಜನೆಯಲ್ಲಿ ರಾಜ್ಯಕ್ಕೆ ಮುಂಚೂಣಿ ಸ್ಥಾನದಲ್ಲಿರಬೇಕು. ಇದಕ್ಕೆ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.

ಹೊಸದಾಗಿ ಸಕಾಲ ಯೋಜನೆಗೆ ಸೇರ್ಪಡೆಯಾದ ಇಲಾಖೆಗಳಿಗೆ ತರಬೇತಿಯ ಅಗತ್ಯವಿದ್ದಲ್ಲಿ ಅಥವಾ ಅನುಷ್ಠಾನದಲ್ಲಿ ತೊಂದರೆಯಿದ್ದಲ್ಲಿ ಜಿಲ್ಲಾ ಸಕಾಲ ನೋಡೆಲ್ ಅಧಿಕಾರಿಗಳ ನೆರವು ಪಡೆಯಿರಿ ಎಂದು ಎಡಿಸಿ ಸಲಹೆ ನೀಡಿದರು.

ಸಕಾಲದಡಿ ನೀಡಲಾಗುವ ಸೇವೆಗಳ ಮಾಹಿತಿಯನ್ನು ಎಲ್ಲ ಇಲಾಕೆಗಳು ಕಚೇರಿಯ ಮುಂಭಾಗದ ಫಲಕಗಳಲ್ಲಿ ಹಾಕಬೇಕು ಎಂದು ಸೂಚಿಸಿದರು.

ಅ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)