ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ: ತ್ವರಿತ ವಿಲೇವಾರಿಗೆ ಡಿಸಿ ಸೂಚನೆ

ಪರಿಹಾರ ಅರ್ಜಿಗೆ ವಿಮಾ ಕಂಪೆನಿಯ ಅಕ್ಷೇಪಣೆಗೆ ಜಿಲ್ಲಾಧಿಕಾರಿ ಅಸಮಾಧಾನ
Last Updated 18 ಮೇ 2019, 14:24 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೃಷಿ ಬೆಳೆ ನಷ್ಟದಿಂದ ವಿಮಾ ಪರಿಹಾರ ಕ್ಲೇಮು ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಪರಿಹಾರ ಪಾವತಿಸಲು ಕ್ರಮ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಗ್ರ ಕೃಷಿ ಅಭಿಯಾನ, ಫಸಲ್ ಬಿಮಾ ಯೋಜನೆ ಹಾಗೂ ಮುಂಗಾರು ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ರೈತರು ಬೆಳೆ ನಷ್ಟದಿಂದ ವಿಮಾ ಪರಿಹಾರ ಕೋರಿ ಸಲ್ಲಿಸಿರುವ ಕ್ಲೇಮುಗಳಿಗೆ ವಿಮಾ ಕಂಪೆನಿಯು ಆಕ್ಷೇಪಣೆ ಹಾಕಿರುವುದು ಸರಿಯಲ್ಲ. ಕೃಷಿ ಭೂಮಿಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸದೆ ವಿಮಾ ಕಂಪೆನಿಗಳು ಕ್ಲೇಮುಗಳಿಗೆ ಆಕ್ಷೇಪಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ವಿಮಾ ಕಂಪೆನಿ ಪ್ರತಿನಿಧಿಗಳು ಕೂಡಲೇ ಕೃಷಿ ಭೂಮಿಗೆ ಭೇಟಿನೀಡಿ ಪರಿಶೀಲಿಸಿ, ಕ್ಲೇಮುಗಳನ್ನು ವಿಲೇವಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಸಭೆಗೆ ಮಾಹಿತಿ ನೀಡಿ, 2018-19ರಲ್ಲಿ ಜಿಲ್ಲೆಯಲ್ಲಿ 1,600 ರೈತರು ಮುಂಗಾರು ಭತ್ತದ ಅವಧಿಯಲ್ಲಿ ಫಸಲ್ ಬಿಮಾ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 3302 ಎಕರೆ ಭೂಮಿಗೆ ಈ ವ್ಯಾಪ್ತಿಗೆ ಬರುತ್ತದೆ. 2018-19ರಲ್ಲಿ 1,776 ಅಡಕೆ ಬೆಳೆಗಾರರು ಹಾಗೂ 68 ಕಾಳುಮೆಣಸು ಬೆಳೆಗಾರರು ವಿಮಾ ಯೋಜನೆಗೆ ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

2016-17ರಲ್ಲಿ 5,202 ಪ್ರಕರಣಗಳಲ್ಲಿ ₹ 183.779 ಲಕ್ಷ ಪರಿಹಾರ ಪಾವತಿಸಲಾಗಿದೆ. ಪ್ರಸಕ್ತ ವರ್ಷ ಪ್ರತೀ ಹೆಕ್ಟೇರ್ ಭತ್ತದ ಕೃಷಿಗೆ ₹ 1,100 ವಿಮಾ ಕಂತು ಹಾಗೂ ₹ 55,000 ವಿಮಾ ಮೊತ್ತ ನಿಗದಿಪಡಿಸಲಾಗಿದೆ ಎಂದರು.

ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ಏರ್ಪಡಿಸಿರುವ ‘ಸಮಗ್ರ ಕೃಷಿ ಅಭಿಯಾನ’ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಮೇ 27 ರಿಂದ ಜೂನ್ 15 ರವರೆಗೆ ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ ರೈತರಿಗೆ ಕೃಷಿ ಮಾಹಿತಿ ನೀಡುವುದು, ಉತ್ಪಾದಕತೆ ಹೆಚ್ಚಿಸುವ ಸಂಬಂಧ ತಾಂತ್ರಿಕ ವಿಚಾರಗಳನ್ನು ಮನವರಿಕೆ ಮಾಡಿಕೊಡಲಾಗುವುದು. ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದ ಏರ್ಪಡಿಸುವುದು ಮುಖ್ಯ ಉದ್ದೇಶ. ಕೃಷಿ ವಸ್ತು ಪ್ರದರ್ಶನಗಳನ್ನೂ ಆಯೋಜಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.

ಕೃಷಿ ಯಂತ್ರಧಾರೆ: ರೈತರಿಗೆ ಅತ್ಯಾಧುನಿಕ ಕೃಷಿ ಉಪಕರಣಗಳನ್ನು ಬಾಡಿಗೆಗೆ ನೀಡಲು ಜಿಲ್ಲೆಯಲ್ಲಿ ಪ್ರತಿ ಹೋಬಳಿಗೆ ಒಂದರಂತೆ 7 ಕೇಂದ್ರಗಳಿವೆ. ಪ್ರಸಕ್ತ ವರ್ಷ ಉಡುಪಿ ಕಸಬಾ ಹಾಗೂ ವಂಡ್ಸೆ ಹೋಬಳಿಗಳಲ್ಲೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದರು.

ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ಎಲ್ಲಾ ಸಲಕರಣೆ ಹಾಗೂ ಯಂತ್ರೋಪಕರಣಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೃಷಿ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT