ಬುಧವಾರ, ನವೆಂಬರ್ 13, 2019
28 °C
ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಕುಲಪತಿ ಸುಬ್ರಹ್ಮಣ್ಯ ಎಡಪಡಿತ್ತಾಯ

ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ

Published:
Updated:
Prajavani

ಉಡುಪಿ: ಇನ್ನೊಬ್ಬರ ನೋವು ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ತೆಗೆದುಕೊಳ್ಳುವುದಕ್ಕಿಂತ, ಕೊಡುವುದರಲ್ಲಿ ನಿಜವಾದ ಖುಷಿ ಇರುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.

ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಸೋಮವಾರ ಆಯೋಜಿಸಿದ ರಮಾಂಜಿ ನಮ್ಮಭೂಮಿ ಕೃಷ್ಣ ಜನ್ಮಾಷ್ಟಮಿಯಂದು ವೇಷಧರಿಸಿ ಸಂಗ್ರಹಿಸಿದ ದೇಣಿಗೆ ಮೊತ್ತದ ವಿತರಣೆ ಕಾರ್ಯಕ್ರಮ ‘ಸಮರ್ಪಣೆ’ ದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ತರಗತಿಯೊಳಗಿನ ಶಿಕ್ಷಣಕ್ಕಿಂತ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗಿ ಅವರ ಕಷ್ಟಗಳಿಗೆ ಸ್ಪಂದಿಸುವುದೆ ನಿಜವಾದ ಶಿಕ್ಷಣ. ಸಾಧನೆಗೆ ಸಾಮರ್ಥ್ಯ, ಇಚ್ಛಾಶಕ್ತಿಯ ಜತೆಗೆ ಅವಕಾಶ ಕೂಡ ಸಿಗಬೇಕು. ಈ ನಿಟ್ಟಿನಲ್ಲಿ ರಮಾಂಜಿ ಅವರ ಸಮಾಜಮುಖಿ ಕಾರ್ಯ ಹೃದಯಮುಟ್ಟುವಂತಿದ್ದು, ಇದರಿಂದ ಸಮಾಜಕ್ಕೆ ಅರ್ಥಪೂರ್ಣವಾದ ಪ್ರೇರಣೆ ದೊರಕಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಾತನಾಡಿ, ರಮಾಂಜಿ ಅವರು ಮಾದರಿ ಕೆಲಸದ ಮೂಲಕ ತಮ್ಮನ್ನು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಕಾರ್ಯ ಇತರರಿಗೂ ಮಾದರಿಯಾಗಬೇಕು. ಅವರ ಪ್ರೇರಣೆಯಿಂದ ಇನ್ನಷ್ಟು ಮಂದಿ ಸಾಮಾಜಿಕ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಕಷ್ಟದಲ್ಲಿರುವವರಿಗೆ ನೆರವಾಗುವ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರಮಾಂಜಿ ಅವರು ಅಷ್ಟಮಿ ಸಂದರ್ಭ ವೇಷ ಧರಿಸಿ ಸಂಗ್ರಹಿಸಿದ 1.50 ಲಕ್ಷ ರೂ. ಮೊತ್ತವನ್ನು ಮೂವರು ವಿದ್ಯಾರ್ಥಿಗಳ ವೈದ್ಯಕೀಯ ಚಿಕಿತ್ಸೆಗೆ ವಿತರಿಸಲಾಯಿತು.

ದಿ. ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ನಿವೃತ್ತ ಸಹಾಯಕ ನಿರ್ದೇಶಕ ಎಂ.ಎಂ. ಗಣಪತಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಕೆ.ಎಸ್‌. ಶ್ರೀಧರಮೂರ್ತಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ವಿಜಯ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ್‌, ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು, ಉದ್ಯಮಿ ಗೋಪಾಲಕೃಷ್ಣ ಕಲ್ಕೂರ, ನಿವೃತ್ತ ಶಿಕ್ಷಕಿ ವಸಂತಿ ಎಸ್‌. ರಾವ್‌, ಸಾಮಾಜಿಕ ಚಿಂತಕ ಗುರುದಾಸ್‌, ನಮ್ಮ ಯಕ್ಷ ಭೂಮಿ ಮಾಜಿ ಅಧ್ಯಕ್ಷ ಬೇಬಿ ಕನ್ಯಾನ, ಕರಾವಳಿ ಯೂತ್‌ಕ್ಲಬ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಉಪಸ್ಥಿತರಿದ್ದರು.

ಮಾಂಜಿ ನಮ್ಮಭೂಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಕೆ.ಜೆ. ಮಂಜುನಾಥ್‌ ಸ್ವಾಗತಿಸಿದರು. ಉಪನ್ಯಾಸಕ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)