ಸಂಸ್ಕೃತಿ ಉಳಿಸುವ ಹೊಣೆಗಾರಿಕೆ ಯುವಜನಾಂಗದ್ದು

7
ಅಂತರರಾಷ್ಟ್ರೀಯ ಮಟ್ಟದ ವಿದ್ವತ್ ಗೋಷ್ಠಿಯಲ್ಲಿ ಐಸಿಪಿಆರ್‌ ಅಧ್ಯಕ್ಷ ಪ್ರೊ.ಎಸ್.ಆರ್.ಭಟ್

ಸಂಸ್ಕೃತಿ ಉಳಿಸುವ ಹೊಣೆಗಾರಿಕೆ ಯುವಜನಾಂಗದ್ದು

Published:
Updated:
Prajavani

ಉಡುಪಿ: ಭಾರತೀಯ ಸಂಸ್ಕೃತಿ ಪವಿತ್ರವಾಗಿದ್ದು, ಎಲ್ಲೆಡೆಯಿಂದ ಮನ್ನಣೆ ದೊರೆಯುತ್ತಿದೆ. ಮನುಷ್ಯನ ಅಭ್ಯುದಯಕ್ಕೆ ಸಂಸ್ಕೃತಿ ಅತ್ಯವಶ್ಯಕವಾಗಿದ್ದು, ಎಲ್ಲರೂ ಪರಿಪಾಲಿಸಬೇಕು ಎಂದು ಐಸಿಪಿಆರ್‌ ಅಧ್ಯಕ್ಷ ಪ್ರೊ.ಎಸ್.ಆರ್.ಭಟ್ ಸಲಹೆ ನೀಡಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಭಾರತೀಯ ವಿದ್ವತ್ ಪರಿಷತ್ ಹಾಗೂ ತತ್ವ ಸಂಶೋಧನಾ ಸಂಸತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಟ್ಟದ ವಿದ್ವತ್ ಗೋಷ್ಠಿಯಲ್ಲಿ ಮಾತನಾಡಿದರು.

ಭಾರತೀಯ ಸಂಸ್ಕೃತಿ ವಿಭಿನ್ನವಾಗಿದ್ದು, ಸಮಗ್ರತೆ ಹಾಗೂ ಏಕತೆಯ ಪ್ರತೀಕವಾಗಿದೆ. ದೇಶದ ಸಂಸ್ಕೃತಿ ಶ್ರೀಮಂತವಾಗಿದ್ದು, ಸಾವಿರಾರು ವರ್ಷಗಳು ಕಳೆದರೂ ನಶಿಸುವುದಿಲ್ಲ. ಸಂಸ್ಕೃತಿಯ ನಾಶಕ್ಕೆ ಕೆಲವು ವಿನಾಶಕಾರಿ ಶಕ್ತಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ಆದರೆ, ಅದು ಸಫಲವಾಗುವುದಿಲ್ಲ. ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಯುವಜನಾಂಗ ಹೊತ್ತುಕೊಳ್ಳಬೇಕು. ಹಿರಿಯರ ಮಾರ್ಗದರ್ಶನದಲ್ಲಿ ವಿಶ್ವದೆಲ್ಲೆಡೆ ಪಸರಿಸುವ ಕಾರ್ಯ ಮಾಡಬೇಕು ಎಂದರು.

ಭಾರತೀಯ ನೆಲದ ಪರಂಪರೆಯನ್ನು ಜಗತ್ತಿಗೆ ಸಾರಬೇಕಾದ ಅವಶ್ಯಕತೆ ಇದೆ. ಗುರು–ಶಿಷ್ಯ ಪರಂಪರೆ ಮರುಸ್ಥಾಪಿಸಬೇಕಾಗಿದೆ. ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಮಾರ್ಕ್ಸ್‌ ಪ್ರೇರಿತ ಇತಿಹಾಸ ಪಠ್ಯವಾಗಿದ್ದು, ನಿಜವಾದ ಇತಿಹಾಸವನ್ನು ಮರೆಮಾಚಲಾಗುತ್ತಿದೆ. ಮಾರ್ಕ್ಸ್‌ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಇತಿಹಾಸವನ್ನು ಬೋಧಿಸಲಾಗುತ್ತಿದೆ. ನಿಜವಾದ ಭಾರತ ಇತಿಹಾಸದ ಸಂಶೋಧನೆ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.

ಗೋಷ್ಠಿಯ ಅಧ್ಯಕ್ಷರಾದ ಪ್ರೊ.ಅಶೋಕ್ ಅಕ್ಲುಜಕರ್ ಮಾತನಾಡಿ, ‘ಸಂಸ್ಕೃತದ ದಾರಿ ನಿರ್ಧರಿಸಬೇಕಾದ ಪ್ರಾಧ್ಯಾಪಕರು ಸಂಕುಚಿತ ಮನೋಭಾವ ಹೊಂದಿದ್ದಾರೆ. ಭಾರತೀಯ ಶಾಸ್ತ್ರಗಳ ಬಗ್ಗೆ ಪಾಶ್ಚಾತ್ಯ ವಿದ್ವಾಂಸರು ತಪ್ಪು ತಿಳಿವಳಿಕೆಗಳನ್ನು ದಾಖಲಿಸುತ್ತಿರುವುದು ದುರದೃಷ್ಟಕರ. ಈ ಬಗ್ಗೆ ಬಗ್ಗೆ ಚರ್ಚೆಗಳು, ಸಂವಾದಗಳು ನಡೆದು, ತಪ್ಪುಗಳನ್ನು ತಿದ್ದಿಕೊಳ್ಳುವ ಕೆಲಸಗಳು ನಡೆಯಬೇಕು ಎಂದರು. 

ಕೆ.ಕೆ.ಎಸ್ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರ್ಕೇಡಿ ಮಾತನಾಡಿ ಪಾಶ್ಚಾತ್ಯ ವಿದ್ವಾಂಸರು ಅವರ ದೃಷ್ಟಿಕೋನಕ್ಕೆ ಸಂಸ್ಕೃತವನ್ನು ಅರ್ಥೈಸಿಕೊಳ್ಳುತ್ತಾರೆ. ಸಂಸ್ಕೃತಕ್ಕೂ ಒಂದು ದೃಷ್ಟಿಕೋನವಿದ್ದು, ಅದನ್ನು ಓದಬೇಕು ಎಂದರು.

ಭಾರತೀಯ ವಿದ್ವತ್ ಪರಿಷತ್ ಸ್ಥಾಪಕರಾದ ವೀರನಾರಾಯಣ ಪಾಂಡುರಂಗಿ ಮಾತನಾಡಿ, ಪಾಶ್ಚಾತ್ಯ ವಿದ್ವಾಂಸರು ಮಂಡಿಸುವ ವಿಚಾರಗಳಲ್ಲಿ ಕೆಲವು ತಪ್ಪುಗಳಿದ್ದು, ಈ ಕುರಿತು ಚರ್ಚಿಸಲು ಭಾರತೀಯ ವಿದ್ವತ್ ಪರಿಷತ್ ಎಂಬ ಗ್ರೂಪ್‌ ರಚಿಸಲಾಗಿದೆ. ಇದರಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ವಾಂಸರಿದ್ದು, ವಿಚಾರ ವಿಮರ್ಶೆಗಳು ನಡೆಯುತ್ತಿವೆ ಎಂದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು, ಮಠದ ದಿವಾನರಾದ ವೇದವ್ಯಾದ ತಂತ್ರಿ, ಪ್ರೊ.ವಿ.ಎನ್.ಪಾಂಡುರಂಗಿ, ಉಡುಪಿ ತತ್ವ ಸಂಶೋಧನಾ ಸಂಸತ್ತಿನ ನಿರ್ದೇಶಕ ಡಾ.ವಂಶಿಕೃಷ್ಣ ಆಚಾರ್ಯ, ಭಾರತೀಯ ವಿದ್ವತ್ ಪರಿಷತ್ತಿನ ಕಾರ್ಯದರ್ಶಿ ನಾಗರಾಜ ಪಟೂರಿ, ಪ್ರೊ.ಜಿ.ಸಿ.ತ್ರಿಪಾಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !