ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ಹಾನಿ: ಮರು ಸರ್ವೆಗೆ ಸೂಚನೆ

ಮಳೆ ಹಾನಿ ಕುರಿತ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
Last Updated 22 ಆಗಸ್ಟ್ 2019, 15:36 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಮನೆಗಳನ್ನು ಮರು ಸರ್ವೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದುಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಮಳೆ ಹಾನಿ ಕುರಿತ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಡವರ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿದ್ದಿವೆ. ಕೆಲವು ಕಡೆ ಗೋಡೆ ಬಿರುಕುಬಿಟ್ಟರೆ, ಕೆಲವು ಕಡೆ ಛಾವಣಿಗಳು ಹಾರಿಹೋಗಿವೆ. ಇವುಗಳನ್ನು ಭಾಗಶಃ ಎಂದು ಪರಿಗಣಿಸುವ ಬದಲು ಮರು ಸರ್ವೆ ಮಾಡುವಂತೆ ತಿಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿಅತಿವೃಷ್ಟಿಯಿಂದ 671 ಮನೆಗಳು ಭಾಗಶಃ ಹಾಗೂ 4 ಮನೆಗಳಿಗೆ ಪೂರ್ಣ ಹಾನಿಯಾಗಿದೆ. ಆದರೆ, ಸಂಪೂರ್ಣ ಹಾನಿಗೊಳಗಾದ ಮನೆಗಳ ಸಂಖ್ಯೆ ಹೆಚ್ಚಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಆಯಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಮರು ಸರ್ವೆಗೆ ಸೂಚನೆ ನೀಡಲಾಗಿದೆ. ಉಳಿದಂತೆ ಮನೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣ ಕಾರ್ಯ ಮಾಡುವಂತೆ ಸೂಚಿಸಲಾಗಿದೆ ಎಂದು ಕೋಟ ತಿಳಿಸಿದರು.

ಪೂರ್ಣ ಮನೆ ಹಾನಿಗೊಳಗಾದವರಿಗೆ ಹಣ ನೀಡುವುದಿಲ್ಲ; ಬದಲಾಗಿ, ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ನಿಂದ ಮನೆ ಕಟ್ಟಿಸಿಕೊಡಲಾಗುವುದು. ಮನೆ ಕಳೆದುಕೊಂಡವರಿಗೆ ತುರ್ತು ₹10,000 ಹಾಗೂ 8 ತಿಂಗಳು ತಲಾ ₹ 5000 ಬಾಡಿಗೆ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ₹545 ಕೋಟಿ ನಷ್ಟ ಅಂದಾಜಿಸಲಾಗಿದೆ. ಮಳೆಗೆ 5 ಜೀವಗಳು ಹಾನಿಯಾಗಿದ್ದು, ಈಗಾಗಲೇ ಭಾಗಶಃ ಪರಿಹಾರ ನೀಡಲಾಗಿದೆ. ಉಳಿದ ಹಣವನ್ನು ಶೀಘ್ರ ಕೊಡಲಾಗುವುದು. ತುರ್ತು ಅವಶ್ಯಕತೆಗಳಿಗೆ ಲಭ್ಯವಿರುವ ಹಣವನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು.

ಒಂದು ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಗೆ ₹ 18,000 ಪರಿಹಾರ ನೀಡಬೇಕು ಎಂಬ ನಿಯಮವಿದ್ದು, ಇದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಹಾಗಾಗಿ, ಭೂಸ್ವಾಧೀನ ಪ್ರಕ್ರಿಯೆ ಮಾಡುವಾಗ ಒಂದು ಅಡಿಕೆ ಮರಕ್ಕೆ ₹3,000, ಒಂದು ತೆಂಗಿಗೆ ₹13,000 ಕೊಡಲಾಗುತ್ತದೆ. ಅದರಂತೆಯೇ ಪರಿಹಾರ ವಿತರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ತೋಟಗಾರಿಕಾ ಬೆಳೆ ನಾಶದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೋಟ ತಿಳಿಸಿದರು.

ಜತೆಗೆ, ಪಂಚಾಯತ್ ರಾಜ್‌, ಲೋಕೋಪಯೋಗಿ ಇಲಾಖೆ ಇಲಾಖೆಯ ರಸ್ತೆಗಳ ಹಾನಿ, ಕಿಂಡಿ ಅಣೆಕಟ್ಟುಗಳಿಗೆ ಹಾನಿ, ಕಾಲುಸಂಕ, ಶಾಲೆ, ಅಂಗನವಾಡಿ ಸೇರಿದಂತೆ ಒಟ್ಟಾರೆಜಿಲ್ಲೆಯಲ್ಲಿ ಸಂಭವಿಸಿರುವ ಮಳೆಹಾನಿಯ ವಿವರಗಳನ್ನು ಅಧಿಕಾರಿಗಳಿಂದ ಪಡೆಯಲಾಗಿದೆ ಎಂದು ಕೋಟ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT