ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರ ಬಹಿಷ್ಕರಿಸಲು ಸಂತೋಷ್ ಹೆಗ್ಡೆ ಕರೆ

‘ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲವೆ?’; ಕೆ.ಪುಟ್ಟಸ್ವಾಮಿ ಸ್ಮರಣಾರ್ಥ ಕುರಿತು ಉಪನ್ಯಾಸ ಕಾರ್ಯಕ್ರಮ
Last Updated 19 ಮೇ 2018, 6:50 IST
ಅಕ್ಷರ ಗಾತ್ರ

ಮೈಸೂರು: ಸಮಾಜ ಬದಲಾಯಿಸಿ, ಭ್ರಷ್ಟರನ್ನು ಬಹಿಷ್ಕರಿಸಿ. ಆಗ ಸಮಾ ಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಯುಕವರಿಗೆ ಇಲ್ಲಿ ಶುಕ್ರವಾರ ಕರೆ ನೀಡಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ ಕೆ.ಪುಟ್ಟಸ್ವಾಮಿ ಸ್ಮಾರಕ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಉಳಿಗಾಲ ವಿಲ್ಲವೆ?’ ಕುರಿತು ಮಾತನಾಡಿದರು.

ಆಸೆಗೆ ಮಿತಿಯಿದೆ, ದುರಾಸೆಗೆ ಮಿತಿಯಿಲ್ಲ, ಮದ್ದಿಲ್ಲ. ಮಾನವೀಯತೆ, ಮೌಲ್ಯಗಳು ಕುಸಿದಿವೆ. ಇನ್ನೊಬ್ಬರಿಗೆ ಹೆಚ್ಚು ಅಂಕ ಬಂದವೆಂದು ಬೇಸರ ಪಟ್ಟುಕೊಳ್ಳಬೇಡಿ. ಮತ್ತೊಬ್ಬರ ದುಡ್ಡಿಗೆ ಆಸೆಪಡಬೇಡಿ. ಚುನಾವಣೆಗಳಲ್ಲಿ ಧರ್ಮ, ಜಾತಿ, ಭಾಷೆ ಬಳಸಿ ಮತ ಕೇಳಲಾಗುತ್ತಿದೆ. ಇದನ್ನು ಬದಲಾಯಿಸಲು ಯುವಕರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಭ್ರಷ್ಟಾಚಾರ ನಿಯಂತ್ರಣ: ಭ್ರಷ್ಟಾಚಾರ ದಿಂದ ಜೈಲಿಗೆ ಹೋಗಿಬಂದವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಭ್ರಷ್ಟಾಚಾರ ಇಲ್ಲದ ಸಂಸ್ಥೆಗಳೇ ಇಲ್ಲ. ಹೀಗಾಗಿ, ಭ್ರಷ್ಟಾಚಾರ ಅಂತ್ಯಗೊಳಿಸಲು ಸಾಧ್ಯವಿಲ್ಲ. ಆದರೆ, ಇದರ ನಿಯಂತ್ರಣ, ಪ್ರಜಾಪ್ರಭುತ್ವದ ಉಳಿವಿಗೆ ಮತ್ತು ನಿಮ್ಮ ಭವಿಷ್ಯಕ್ಕಾಗಿ ಈ ಸಮಾಜ ಬದಲಾಯಿಸಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಕಾನೂನು ವಿದ್ಯಾರ್ಥಿ ಮಹೇಶ್‌, ‘ಜನರಿಂದ ಜನರಿಗಾಗಿ ಎನ್ನುವ ಪ್ರಜಾಪ್ರಭುತ್ವದ ಆಶಯ ಉಳಿದಿದೆಯೇ‘ ಎಂದು ಕೇಳಿದಾಗ ಈಗ ಕೆಲವರಿಂದ ಕೆಲವರಿಗಾಗಿ ಪ್ರಜಾಪ್ರಭುತ್ವ ಎನ್ನುವಂತಾಗಿದೆ ಎಂದು ಹೆಗ್ಡೆ ಉತ್ತರಿಸಿದರು.

ರಾಜಕಾರಣಿಗಳಿಗೆ ತರಬೇತಿ ಅಗತ್ಯವಿದೆ ಎಂಬ ಪ್ರಶ್ನೆಗೆ, ‘ತರಬೇತಿ ಕೊಟ್ಟರೂ ರಾಜಕಾರಣಿಗಳು ಬದಲಾ ಗುವುದಿಲ್ಲ. ಪ್ರಮುಖ ಪಕ್ಷಗಳಲ್ಲಿರುವ ಅತ್ಯಾಚಾರಿಗಳನ್ನು, ಭ್ರಷ್ಟಾಚಾರಿಗಳನ್ನು ನಾವು ಒಪ್ಪಿಕೊಂಡಿದ್ದೇವೆ. ಲೋಕಾ ಯುಕ್ತದಲ್ಲಿದ್ದಾಗ 8 ಸಚಿವರು ಹಾಗೂ 250 ಅಧಿಕಾರಿಗಳ ವಿರುದ್ಧ ವರದಿ ಕೊಟ್ಟರೂ ಪ್ರಯೋಜನ ಆಗಲಿಲ್ಲ’ ಎಂದು ವಿಷಾದಿಸಿದರು.

ನ್ಯಾಯ ವಿಳಂಬದಿಂದ ಎಚ್ಚೆತ್ತು ಕೊಂಡು ತ್ವರಿತಗತಿಯ ನ್ಯಾಯ ಸಿಗುವಂತಾಗಬೇಕು. ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪ್ರಕರಣಗಳಿಗೆ ಸಂಬಂಧಿಸಿ ಸುದೀರ್ಘ ಚರ್ಚೆ ನಡೆದು ಈಚೆಗೆ ಶಿಕ್ಷೆಯಾಗಿದೆ. ಕೆಳಹಂತದ ನ್ಯಾಯಾಲಯಗಳಲ್ಲಿ 10 ವರ್ಷ, ಹೈಕೋರ್ಟ್‌ಗಳಲ್ಲಿ 10 ವರ್ಷ, ಸುಪ್ರೀಂ ಕೋರ್ಟ್‌ನಲ್ಲಿ 10 ವರ್ಷ... ಹೀಗೆ 30 ವರ್ಷಗಳವರೆಗೆ ಪ್ರಕರಣಗಳನ್ನು ಎಳೆಯಲಾಗುತ್ತಿದೆ. ನ್ಯಾಯಾಧೀಶರಿಲ್ಲ, ಕೋರ್ಟ್‌ಗಳಿಲ್ಲ ಎನ್ನುವುದು ನೆಪವಾಗದೆ ಬದಲಾವಣೆ ಬರಬೇಕು ಎಂದು ಒತ್ತಾಯಿಸಿದರು.

ಕಾನೂನು ಕಾಲೇಜು ಪ್ರಾಧ್ಯಾಪಕ ಎಂ.ಕೆ.ರಮೇಶ್ ಮಾತನಾಡಿ, ವಿದ್ಯಾವರ್ಧಕ ಕಾಲೇಜು ಆರಂಭಿಸಿದ ಕೆ.ಪುಟ್ಟಸ್ವಾಮಿಯವರು ಕಲಿಯಲು ಬರುವ ವಿದ್ಯಾರ್ಥಿಗಳಿಗೆ ನಿರಾಸೆ ಮಾಡುತ್ತಿರಲಿಲ್ಲ ಎಂದು ಸ್ಮರಿಸಿದರು.

ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಉಪಸ್ಥಿತರಿದ್ದರು. ಸಂಘದ ಗೌರವ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ಬಿ.ವಾಸುದೇವ್ ಸ್ವಾಗತಿಸಿದರು.

ಅಣ್ಣಾ ಹಜಾರೆ– ಲಾಲೂ– ಮುದುಕ...

ಲಾಲೂ ಪ್ರಸಾದ್‌ ಯಾದವ್‌ ರೈಲ್ವೆ ಸಚಿವರಾಗಿದ್ದ ದಿನಗಳವು. ಆಗ ಅಣ್ಣಾ ಹಜಾರೆ ಅವರು ಜನಸೇವಕರಾದ ಪ್ರಧಾನಿಯವರೆ ಎಂದು ಪತ್ರ ಬರೆದಿದ್ದರು. ಲೋಕಸಭೆಯಲ್ಲಿ ಲಾಲೂ ಅವರು, ‘ನೋಡ್ರಿ ಈ ಮುದುಕನ ಅಹಂಕಾರ. ಪ್ರಧಾನಿಯವರನ್ನೇ ಜನಸೇವಕ ಎಂದು ಕರೆಯುತ್ತಾರೆ. ಇನ್ನು ನಮ್ಮನ್ನು ಏನೆಂದು ಕರೆಯಬಹುದು ಎಂದು ಪ್ರಶ್ನಿಸಿದ್ದರು’ ಎಂದು ಸಂತೋಷ್‌ ಹೆಗ್ಡೆ ಸ್ಮರಿಸಿದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ, ಹಿಂದೂ ರಾಷ್ಟ್ರವಾಗಿಸುತ್ತೇವೆ ಎನ್ನುತ್ತಾರೆ. ಆದರೆ, ಈ ದೇಶ ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿ ಉಳ್ಳದ್ದು. ಜತೆಗೆ, ಪ್ರಜಾಪ್ರಭುತ್ವ ಮೀರಿದ ರಾಜನೀತಿಯಿಲ್ಲ. ಹೀಗಿದ್ದಾಗ ಸಂವಿಧಾನದ ಮೂಲಕ ಸಮಾಜ ಸೇವಕರಾದ ಜನಪ್ರತಿನಿಧಿಗಳು ಬದಲಾಯಿಸುವ ಕುರಿತು ಮಾತನಾಡಬಾರದು ಎಂದರು.

**
ಆಯಾ ಇಲಾಖೆ ಗಳ ವರ್ಗಾವಣೆಗೆ ಸಂಬಂಧಿಸಿ ಪ್ರಾಧಿಕಾರ ರಚನೆಗೊಂಡರೆ <br/>ಬೇಕಾಬಿಟ್ಟಿ ವರ್ಗಾವಣೆಗೆ ಕಡಿವಾಣ ಬೀಳಲಿದೆ
- ಎನ್‌.ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT