ಪಡುಬಿದ್ರಿ: ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾಪು ತಾಲ್ಲೂಕು ಪಂಚಾಯಿತಿ ವತಿಯಿಂದ ‘ಕಾಪು ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ’ ಭಾನುವಾರ ನಡೆಯಿತು.
ಕಾಪು ತಾಲ್ಲೂಕಿನ 24 ಶಾಲೆಗಳ 900ಕ್ಕೂ ಅಧಿಕ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಬಡ್ಡಿ, ಥ್ರೋಬಾಲ್, ಕೊಕ್ಕೊ, ವಾಲಿಬಾಲ್, ಪುಟ್‌ಬಾಲ್ ಸಹಿತ ವೈಯಕ್ತಿಕ ವಿಭಾಗದಲ್ಲಿ ಕ್ರೀಡಾಕೂಟ ಜರುಗಿತು. ತಹಶೀಲ್ದಾರ್ ಪ್ರತಿಭಾ ಆರ್. ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ರೀಡಾ ಪ್ರೋತ್ಸಾಹಕ, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ ಅವರನ್ನು ಸಂಘಟಕರ ವತಿಯಿಂದ ಸನ್ಮಾನಿಸಲಾಯಿತು. ರಾಷ್ಟ್ರೀಯ ಹೈಜಂಪ್ ಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರಬೋದ್‌ಚಂದ್ರ ಹೆಜ್ಮಾಡಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಸುವರ್ಣ, ಕಿರಣ್ ಶೆಟ್ಟಿ ಇದ್ದರು. ತಾಲ್ಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ರಿತೇಶ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನವೀನ್ ಶೆಟ್ಟಿ ಇನ್ನಂಜೆ ವಂದಿಸಿದರು.