ಭಾನುವಾರ, ಸೆಪ್ಟೆಂಬರ್ 15, 2019
26 °C
ದಸರಾ ಕ್ರೀಡಾಕೂಟ ಉದ್ಘಾಟಿಸಿ ಶಾಸಕ ರಘುಪತಿ ಭಟ್‌

ರಾಷ್ಟ್ರಮಟ್ಟದ ಪ್ರತಿಭೆಗಳು ಬೆಳೆಯಲಿ

Published:
Updated:
Prajavani

ಉಡುಪಿ: ಜಿಲ್ಲೆಯಲ್ಲಿ ಕ್ರೀಡಾಪಟುಗಳ ಸಾಧನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಹ ಕ್ರೀಡಾಪಟುಗಳು ಜಿಲ್ಲೆಯಿಂದ ಹೊರಹೊಮ್ಮಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್‌ ಹೇಳಿದರು.

ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಪಟುಗಳು ನಿರಂತರವಾಗಿ ಅಭ್ಯಾಸ ಮಾಡುವುದರ ಜತೆಗೆ ಕ್ರೀಡೆಯಲ್ಲಿ ತಾಂತ್ರಿಕ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಇತರೆ ಸ್ಥಳಗಳಲ್ಲಿ ನಡೆಯುವ ಕ್ರೀಡಾಕೂಟಗಳನ್ನು ವೀಕ್ಷಿಸಿ ಅಲ್ಲಿ ಭಾಗವಹಿಸುವ ಕ್ರೀಡಾಪಟುಗಳ ತಂತ್ರಗಾರಿಕೆಯನ್ನು ತಮ್ಮಲ್ಲಿ ಸಹ ಅಳವಡಿಸಿಕೊಳ್ಳುವ ಮೂಲಕ ಪ್ರೇರಣೆ ಪಡೆಯಬೇಕು ಎಂದರು.

ಉಡುಪಿ ಜಿಲ್ಲೆಯಲ್ಲಿ ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿಗೆ ಉತ್ತಮ ಅವಕಾಶ ಹಾಗೂ ಸೌಲಭ್ಯಗಳಿವೆ. ಇವುಗಳ ಸದುಪಯೋಗ ಪಡೆದು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ತೋರಬೇಕು ಎಂದು ಕರೆ ನೀಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಜಿಪಂ ಸದಸ್ಯ ಉದಯ ಕೋಟ್ಯಾನ್‌, ಮಾಜಿ ನಗರಸಭಾ ಸದಸ್ಯ ಮಹೇಶ್‌ ಠಾಕೂರ್‌, ಕ್ರೀಡಾ ತರಬೇತುದಾರ ರಾಮಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ರಾಜಶೇಖರ್‌ ಕಾರ್ಯಕ್ರಮ ನಿರೂಪಿಸಿದರು.

ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಇಂದಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಇಲ್ಲಿ ವಿಜೇತರಾದ ಕ್ರೀಡಾಪಟುಗಳು ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಪಡೆಯುತ್ತಾರೆ.

Post Comments (+)