ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನಗಳ ಅಧ್ಯಯನದಿಂದ ನೆಮ್ಮದಿ’

Last Updated 30 ಜನವರಿ 2019, 14:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ವಚನಗಳ ಅಧ್ಯಯನದಿಂದ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ’ ಎಂದು ಬೀದರ್‌ನ ಬಸವಗಿರಿ ಲಿಂಗಾಯತ ಮಹಾಮಠದ ಪ್ರಭುದೇವರು ಹೇಳಿದರು.

ನಗರದ ಬಸವ ಸಮಿತಿ ಅನುಭವ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಧ್ಯಾತ್ಮ ಮತ್ತು ಲೌಕಿಕತೆಯ ಸಮನ್ವಯವೇ ಶರಣರ ದರ್ಶನ. ವಚನಗಳು ಶ್ರೇಷ್ಠ ಮಂತ್ರಗಳು, ನೆಮ್ಮದಿಯ ಬದುಕಿನ ಸೂತ್ರಗಳು. ಇಲ್ಲಿ ಶರಣ ದರ್ಶನವಿದೆ, ಭವ ಭಾರ ತಪ್ಪಿಸುವ ಗುರಿ ಇದೆ. ಜೀವನದ ದಾರಿ ಇದೆ, ಸದ್ಭಾವದ ಸೌರಭವಿದೆ’ ಎಂದರು.

‘ನಮ್ಮ ಜೀವನದಲ್ಲಿ ಅನೇಕ ದ್ವಂದ್ವಗಳಿವೆ. ಜೀವನ ಬೇಸರವಾಗುವಷ್ಟು ವಿಷಮ ಪರಿಸ್ಥಿತಿಗಳು ಎದುರಾಗುತ್ತವೆ. ವಚನಗಳ ಅಧ್ಯಯನದಿಂದ ಶರಣರ ದರ್ಶನ ಲಭಿಸುತ್ತದೆ. ಅಧ್ಯಾತ್ಮ ಮತ್ತು ಲೌಕಿಕಗಳ ಸಮನ್ವಯ ದರ್ಶನವಾಗುತ್ತದೆ. ನಕಾರಾತ್ಮಕ ಚಿಂತೆಗಳನ್ನು ಹೋಗಲಾಡಿಸಿ, ಚೈತನ್ಯದ ಚಿಲುಮೆಯನ್ನು ಹೊತ್ತಿಸುವುದೇ ವಚನಗಳ ಉದ್ದೇಶ. ಜೀವನದ ನೈಜ ದರ್ಶನವನ್ನು ಅನುಭವಿಸಬೇಕಾದರೆ ಶರಣರ ವಚನಗಳನ್ನು ಶ್ರದ್ಧೆಯಿಂದ ಅಭ್ಯಸಿಸಬೇಕು’ ಎಂದು ಹೇಳಿದರು.

ವೀರಶೈವ ಸಮಾಜದ ಅಧ್ಯಕ್ಷ ಶ್ರೀಶೈಲ ಹಾದಿಮನಿ ಮಾತನಾಡಿ, ‘ಶರಣರ, ಸಂತರ ದಾರ್ಶನಿಕರ ನುಡಿಗಳು ಕತ್ತಲ ಮನೆಗೆ ದೀವಟಿಗೆಗಳಂತೆ. ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವುಗಳು ನಂದಾದೀಪದಂತೆ ನಮ್ಮ ಬದುಕನ್ನು ಬೆಳಗುತ್ತವೆ’ ಎಂದರು.

ಡಾ. ಶಾಂತವೀರ ಸುಂಕದ ಮಾತನಾಡಿ, ‘ಬಸವಣ್ಣನವರು ಕಲ್ಯಾಣದಲ್ಲಿ ಮಹಾಮಂತ್ರಿಯಾಗಿದ್ದರೂ ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ನಡೆ-ನುಡಿಗಳ ಸಮನ್ವಯತೆಯ ಮಹಾನ್ ವ್ಯಕ್ತಿಯಾಗಿದ್ದರು’ ಎಂದರು.

ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ, ದತ್ತಿ ದಾಸೋಹಿಗಳಾದ ವಿಶ್ವನಾಥ ಕಾಮಶೆಟ್ಟಿ ಇದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT