ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಬದಲು ಮಕ್ಕಳಿಂದ ಮಾಹಿತಿ ಪಡೆದ ಡಿಸಿ

ಸೂಡಾದ ಕಾಪಿಕಾಡು ಅಂಗನವಾಡಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್
Last Updated 17 ಡಿಸೆಂಬರ್ 2019, 13:24 IST
ಅಕ್ಷರ ಗಾತ್ರ

ಉಡುಪಿ: ಕಾರ್ಕಳ ತಾಲ್ಲೂಕಿನ ಸೂಡಾದ ಕಾಪಿಕಾಡು ಅಂಗನವಾಡಿ ಕೇಂದ್ರಕ್ಕೆ ಗುರುವಾರ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಂಗಳವಾರ ದಿಢೀರ್ ಭೇಟಿನೀಡಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು. ಡಿಸಿ ದಿಢೀರ್ ಭೇಟಿಯಿಂದ ಅಲ್ಲಿನ ಸಿಬ್ಬಂದಿ ಗಲಿಬಿಲಿಗೊಂಡರೆ, ಮಕ್ಕಳು ಮಾತ್ರ ಅಧಿಕಾರಿಯ ಜತೆಗೆ ಪ್ರೀತಿಯಿಂದ ಮಾತನಾಡಿದರು.

ಮಂಗಳವಾರ ಕಾರ್ಕಳ ತಾಲ್ಲೂಕಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾರ್ಗಮಧ್ಯೆ ಕಾಪಿಕಾಡು ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಸರ್ಕಾರದ ಸೌಲಭ್ಯಗಳು ಅಂಗನವಾಡಿ ಮಕ್ಕಳನ್ನು ತಲುಪುತ್ತಿವೆಯೇ ಎಂಬ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದಿದ್ದು ವಿಶೇಷವಾಗಿತ್ತು.

ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸದೆ ನೇರವಾಗಿ ಅಂಗನವಾಡಿ ಮಕ್ಕಳ ಬಳಿ ತೆರಳಿದ ಡಿಸಿ ಪ್ರೀತಿಯಿಂದ ಮಾತನಾಡಿಸಿ, ಬೆಳಿಗ್ಗೆ ಕೇಂದ್ರದಲ್ಲಿ ಏನು ಕೊಡಲಾಯಿತು ಎಂದು ಪ್ರಶ್ನಿಸಿದರು. ಈಗಷ್ಟೆ ಹಾಲು ಕೊಟ್ಟರು, ಕುಡಿದೆವು ಎಂದು ಮಕ್ಕಳು ಹೇಳುತ್ತಿದ್ದಂತೆ ಹಾಲು ನೀಡಿರುವುದನ್ನು ಖಾತ್ರಿ ಮಾಡಿಕೊಂಡರು.ಬಳಿಕ ಮಕ್ಕಳ ಜತೆ ಸ್ವಲ್ಪ ಸಮಯ ಕಳೆದು ಚಿಕ್ಕಿಯನ್ನು ನೀಡಿದರು.

ನಂತರ, ಅಂಗನವಾಡಿ ಸಿಬ್ಬಂದಿಯ ಬಳಿಗೆ ತೆರಳಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಕೇಂದ್ರದಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿ ಅಲ್ಲಿದ್ದ ಆಹಾರ ಪೊಟ್ಟಣಗಳ ಗುಣಮಟ್ಟ, ತಯಾರಿಕೆಯ ದಿನಾಂಕವನ್ನು ನೋಡಿ, ಅಂಗವನಾಡಿಯ ರಿಜಿಸ್ಟರ್ ಪುಸ್ತಕದ ಮಾಹಿತಿಯನ್ನು ನೋಡಿದರು.

ಸರ್ಕಾರದಿಂದ ನೀಡಲಾಗುವ ಎಲ್ಲ ಸೌಲಭ್ಯಗಳು ಅಂಗನವಾಡಿ ಮಕ್ಕಳಿಗೆ ತಲುಪಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಆಹಾರ ಗುಣಮಟ್ಟದಿಂದ ಕೂಡಿರಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಉಡುಪಿ ಜಿಲ್ಲೆಯಲ್ಲಿರುವ 1,191 ಅಂಗನವಾಡಿಗಳಲ್ಲಿ ಸ್ವಚ್ಛತೆ, ಮಕ್ಕಳಿಗೆ, ಗರ್ಭಿಣಿ, ಬಾಣಂಂತಿಯರಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಲು ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದ ತಂಡವನ್ನು ಜಿಲ್ಲಾಧಿಕಾರಿ ರಚಿಸಿದ್ದಾರೆ. ಅಧಿಕಾರಿಗಳು ಖುದ್ದು ಭೇಟಿನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT