ಬುಧವಾರ, ಜೂನ್ 16, 2021
23 °C
ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಸೋಂಕು ತಡೆಗೆ ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಳ: ಡಿಸಿ ಜಿ.ಜಗದೀಶ್‌

ಕೋವಿಡ್‌ ನಿಯಮ ಉಲ್ಲಂಘನೆ: ಮದುವೆಗಳ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮದುವೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವ ದೂರುಗಳು ಕೇಳಿ ಬರುತ್ತಿದ್ದು, ರಾತ್ರಿ ವೇಳೆ ಮದುವೆ ಮನೆಗಳಿಗೆ ಭೇಟಿನೀಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಗ್ರಾಮೀಣ ಪ್ರದೇಶಗಳು ಸೋಂಕು ಮುಕ್ತವಾಗಬೇಕು ಎಂಬ ಪ್ರಧಾನಿ ಮೋದಿ ಅವರ ಸೂಚನೆಯಂತೆ ಹಳ್ಳಿಗಳಲ್ಲಿ ಸೋಂಕು ಹರಡದಂತೆ ತಡೆಯಲು ಆದ್ಯತೆ ನೀಡಲಾಗಿದೆ. ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿ ಸೋಂಕು ಪತ್ತೆಯಾದವರನ್ನು ಐಸೊಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡುವುದಕ್ಕೆ ಒತ್ತು ನೀಡಲಾಗಿದೆ ಎಂದರು.

ಪ್ರತಿದಿನ ಸರಾಸರಿ 2,800 ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ವಾರದಲ್ಲಿ ಶೇ 34ರಷ್ಟು ಪಾಸಿಟಿವಿಟಿ ದರ ಕಂಡುಬಂದಿದೆ. ಮುಂದೆ ಸೋಂಕು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತ ಕಾಲಹರಣ ಮಾಡಿ ಕೊನೆಗೆ ಐಸಿಯು ಬೆಡ್‌ಗಳಿಗೆ ಬರುವ ಹಾಗೂ ಆಮ್ಲಜನಕ ಪ್ರಮಾಣ ಕುಸಿದ ಬಳಿಕ ಆಸ್ಪತ್ರೆಗೆ ಬರುವ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸೋಂಕು ಆರಂಭದಲ್ಲಿಯೇ ಆಸ್ಪತ್ರೆಗಳಿಗೆ ಬಂದರೆ ಅಗತ್ಯ ಚಿಕಿತ್ಸೆ ನೀಡಿ ಜೀವ ಉಳಿಸಬಹುದು. ಕೊನೆಯ ಹಂತದಲ್ಲಿ ಬಂದರೆ ಪ್ರಯೋಜನವಿಲ್ಲ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ರೆಮೆಡಿಸಿವರ್ ಕೊರತೆ ಇಲ್ಲ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿದ್ದ 90 ಐಸಿಯು ಬೆಡ್‌ಗಳನ್ನು 136 ಬೆಡ್‌ಗಳಿಗೆ ಹೆಚ್ಚಿಸಲಾಗಿದೆ ಎಂದರು.

ನಗರಗಳಲ್ಲಿ ಕಾಣಿಸಿಕೊಂಡ ಕೋವಿಡ್ ಎರಡನೇ ಅಲೆ ಹಳ್ಳಿಗಳಿಗೆ ಹಬ್ಬಿದೆ. ಏಪ್ರಿಲ್ ಕೊನೆಯವರೆಗೂ ಜಿಲ್ಲೆಯಲ್ಲಿ ಶೇ 14 ಪಾಸಿಟಿವಿಟಿ ದರ ಇತ್ತು. ಲಾಕ್‌ಡೌನ್ ಬಳಿಕ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಳಿಗೆ ಜನರು ಬಂದ ಪರಿಣಾಮ ಪಾಸಿಟಿವಿಟಿ ದರ ದುಪ್ಪಟ್ಟಾಗಿದೆ.

ಗ್ರಾಮೀಣ ಭಾಗದಲ್ಲಿ ಶಂಕಿತರ ಗಂಟಲದ್ರವ ಪರೀಕ್ಷೆಗೆ 67 ತಂಡಗಳನ್ನು ಮಾಡಿ ವಾಹನಗಳನ್ನು ಒದಗಿಸಲಾಗಿದೆ. ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗಳಲ್ಲಿ ಹಾಗೂ ಉಳಿದವರಿಗೆ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ನೀಡುವಂತೆ ತಂಡಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚುವರಿ ನಿರ್ಬಂಧಗಳು ಅವಶ್ಯವಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಅನುಷ್ಠಾನಗೊಳಿಸಲು ಸರ್ಕಾರ ಅಧಿಕಾರ ನೀಡಿದೆ. ಸದ್ಯಕ್ಕೆ 24 ರವರೆಗೆ ಸರ್ಕಾರದ ನಿರ್ಬಂಧಗಳು ಮಾತ್ರ ಮುಂದುವರಿಯಲಿವೆ ಎಂದು ತಿಳಿಸಿದರು.

ಹೆಚ್ಚುವರಿ ಆಮ್ಲಜನಕಕ್ಕೆ ಮನವಿ: ಜಿಲ್ಲಾಧಿಕಾರಿ

ಜಿಲ್ಲೆಗೆ ಪ್ರತಿನಿತ್ಯ 8.5 ಮೆಟ್ರಿಕ್ ಟನ್‌ ಆಮ್ಲಜನಕ ಪೂರೈಕೆಯಾಗುತ್ತಿದ್ದು, 10 ಮೆಟ್ರಿಕ್‌ ಟನ್‌ಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸಿಕ್ಕರೆ 25 ಐಸಿಯು ಬೆಡ್‌ಗಳನ್ನು ಹಾಕಲಾಗುವುದು. ಸದ್ಯ 1,200ಕ್ಕೂ ಹೆಚ್ಚು ಆಮ್ಲಜನಕ ಬೆಡ್‌ಗಳು ಲಭ್ಯವಿದ್ದು, ಹೆಚ್ಚುವರಿ ಆಮ್ಲಜನಕ ಸಿಕ್ಕರೆ ಎಲ್ಲ ಬೆಡ್‌ಗಳ ಬಳಕೆ ಮಾಡಿಕೊಳ್ಳಲಾಗುವುದು. ಸದ್ಯ ಕೋವಿಡ್‌ ಕೇರ್ ಕೇಂದ್ರಗಳಲ್ಲಿ 106 ಸೋಂಕಿತರಿದ್ದಾರೆ. 2000 ಬೆಡ್‌ಗಳಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಇಲ್ಲದವರು ಕೋವಿಡ್‌ ಕೇರ್ ಸೆಂಟರ್‌ಗಳಿಗೆ ಬರಬೇಕು. ಚಿಕಿತ್ಸೆಗೆ ವೈದ್ಯರು, ನರ್ಸ್‌ಗಳನ್ನು ನೇಮಕ ಮಾಡಲಾಗಿದೆ. ಪಲ್ಸ್ ಆಕ್ಸಿಮೀಟರ್‌ಗಳಿದ್ದು, ನಿರಂತರ ತಪಾಸಣೆ ನಡೆಯುತ್ತದೆ ಎಂದರು.

‘ಕಪ್ಪು ಶಿಲೀಂಧ್ರ ಪತ್ತೆ ಇಲ್ಲ’

ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿಲ್ಲ. ಸ್ಟಿರಾಯ್ಡ್‌ಗಳ ಬಳಕೆ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಸಮಸ್ಯೆ ಕಂಡುಬಂದಿಲ್ಲ. ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆಯಾದರೆ, ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಪ್ರಧಾನಿ ಜತೆ ಡಿಸಿ ವಿಡಿಯೋ ಸಂವಾದ

ದೇಶದಲ್ಲಿ ಅತೀ ಹೆಚ್ಚು ಕೋವಿಡ್ ಪಾಸಿಟಿವಿಟಿ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭಾಗವಹಿಸಿದ್ದರು. ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಿದ ಪ್ರಧಾನಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು