ಮಂಗಳವಾರ, ಮೇ 18, 2021
30 °C
ಡಿಸಿ ವಾಗ್ದಾಳಿ

ಸಾಲಮನ್ನಾ ನೋಂದಣಿಗೆ ನಿರಾಸಕ್ತಿ: ಬ್ಯಾಂಕ್‌ ಅಧಿಕಾರಿಗಳ ಚಳಿ ಬಿಡಿಸಿದ ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಾಲ ಮನ್ನಾ ಯೋಜನೆಯಡಿ ಅರ್ಹ ರೈತರನ್ನು ನೋಂದಣಿ ಮಾಡಿಕೊಳ್ಳಲು ಬ್ಯಾಂಕ್‌ಗಳು ನಿರಾಸಕ್ತಿ ವಹಿಸಿವೆ. ಇಂತಹ ಧೋರಣೆಯನ್ನು ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಸಾಲ ಮನ್ನಾ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಬ್ಯಾಂಕ್‌ಗಳಲ್ಲಿ ನೋಂದಣಿ ಕಡ್ಡಾಯ. ನೋಂದಣಿ ಮಾಡಿಸಲು ರೈತರು ಬ್ಯಾಂಕ್‌ಗೆ ಹೋದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ ಎಂದು ಡಿಸಿ ಗರಂ ಆದರು.

ಕೆವಿಜಿಬಿ ಬ್ಯಾಂಕ್‌ ಬ್ಯಾಂಕ್‌ನಲ್ಲಿ 1,593 ಬೆಳೆ ಸಾಲದ ಅಕೌಂಟ್‌ಗಳಿವೆ. ಇದುವರೆಗೂ ಕೇವಲ 268 ಅರ್ಜಿಗಳು ಮಾತ್ರ ವೆಬ್‌ಸೈಟ್‌ಗೆ ಅಪ್‌ಲೋಡ್ ಆಗಿವೆ. ಇಷ್ಟು  ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸಿದರೆ, ನಿಗಧಿತ ಅವಧಿಯೊಳಗೆ ನೋಂದಣಿ ಪ್ರಕ್ರಿಯೆ ಮುಗಿಯುವುದಿಲ್ಲ ಎಂದು ಡಿಸಿ ಅಸಮಾಧಾನ ವ್ಯಕ್ತಪಡಿಸಿದರು.‌

ಈಚೆಗೆ ಬ್ಯಾಂಕ್‌ಗಳಿಗೆ ಭೇಟಿ ನೀಡಿದಾಗ ರೈತರ ಹಾಗೂ ಬ್ಯಾಂಕ್ ಅಧಿಕಾರಿಗಳ ಮಧ್ಯೆ ಸಂವಹನವೇ ಇಲ್ಲದಿರುವುದು ಕಂಡುಬಂತು. ರೈತರು ನೋಂದಣಿಗೆ ಬರುತ್ತಿಲ್ಲ ಎಂದು ದೂರುತ್ತೀರಿ; ಬ್ಯಾಂಕ್‌ಗೆ ಬಂದರೆ ಸರಿಯಾಗಿ ಸ್ಪಂದಿಸದಿದ್ದರೆ ಹೇಗೆ ಎಂದು ಚಾಟಿ ಬೀಸಿದರು.

ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಿದೆ. ರೈತರ ಸಾಲ ಮನ್ನಾ ಮಾಡುವ ಮೂಲಕ ಬ್ಯಾಂಕ್‌ಗಳಲ್ಲಿರುವ ವಸೂಲಾಗದ ಸಾಲದ ಪ್ರಮಾಣವನ್ನು ಕಡಿಮೆಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದರೂ ಸ್ಪಂದಿಸದಿದ್ದರೆ ಹೇಗೆ. ಇಂತಹ ವರ್ತನೆಯನ್ನು ಜಿಲ್ಲಾಡಳಿತ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲು ಸಾಲು ಬ್ಯಾಂಕ್‌ ರಜೆಗಳಿರುವ ವಿಚಾರ ತಿಳಿದಿದ್ದರೂ ನೋಂದಣಿಗೆ ನಿರಾಸಕ್ತಿ ವಹಿಸಿರುವುದು ಅಕ್ಷಮ್ಯ. ಸಮಸ್ಯೆಗಳಿದ್ದರೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಈ ಸಂದರ್ಭ ಇಂಟರ್‌ನೆಟ್‌ ಸಮಸ್ಯೆ ಇರುವುದಾಗಿ ಬ್ಯಾಂಕ್‌ ಅಧಿಕಾರಿಯೊಬ್ಬರು ಹೇಳಿದಾಗ ಸಿಟ್ಟಿಗೆದ್ದ ಜಿಲ್ಲಾಧಿಕಾರಿ, ‘ಇಂಟರ್‌ನೆಟ್‌ ಸರಿಯಿಲ್ಲ, ತಾಂತ್ರಿಕ ಸಮಸ್ಯೆಗಳಿವೆ ಎಂಬ ಕ್ಲುಲ್ಲಕ ಕಾರಣಗಳನ್ನು ಸಭೆಯಲ್ಲಿ ಹೇಳಬೇಡಿ. ವೇಗದ ಇಂಟರ್‌ನೆಟ್‌ ಸಂಪರ್ಕ ಇಲ್ಲ ಪಡೆದಿಲ್ಲ ಎಂದರೆ ಅದು ಬ್ಯಾಂಕ್‌ಗೆ ಅವಮಾನವಾದಂತೆ. ಗುಣಮಟ್ಟದ ಇಂಟರ್‌ನೆಟ್ ಸಂಪರ್ಕ ಪಡೆದು, ಗೂಗಲ್ ಕ್ರೋಮ್‌ ಮೂಲಕವೇ ಅರ್ಜಿಗಳನ್ನು ಅಪ್‌ಲೋಡ್ ಮಾಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧು ರೂಪೇಶ್‌, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರುದ್ರೇಶ್, ನಬಾರ್ಡ್‌ ಎಜಿಎಂ ರಮೇಶ್‌ ಅವರೂ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು