ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಬದಲು ರಸ್ತೆಗಳಿದು ಕೆಲಸ ಮಾಡಿ

ಬೆಳಿಗ್ಗೆ 6ಕ್ಕೆ ವಾರ್ಡ್‌ನಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಡಿಸಿ ಜಗದೀಶ್ ಸೂಚನೆ
Last Updated 29 ಆಗಸ್ಟ್ 2019, 14:16 IST
ಅಕ್ಷರ ಗಾತ್ರ

ಉಡುಪಿ: ಬೆಳಿಗ್ಗೆ 6ಕ್ಕೆ ನಗರದ ರಸ್ತೆಗಳಿದು ಕೆಲಸ ಮಾಡುವಂತಹ ಅಧಿಕಾರಿಗಳು ಬೇಕು. ಬೆಳಿಗ್ಗೆ 10ಕ್ಕೆ ಕಚೇರಿಗೆ ಬಂದು ಕೆಲಸ ಮಾಡುವ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ನಗರಸಭೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಗರಸಭೆ ಸಭಾಂಗಣದಲ್ಲಿ ಗುರುವಾರ ನಗರದ ಸಮಸ್ಯೆಗಳ ಕುರಿತು ಅಧಿಕಾರಿಗಳ ಹಾಗೂ ಕೌನ್ಸಿಲರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಛತೆಯ ಹೊಣೆ ನಗರಸಭೆಗೆ ಸೇರಿದ್ದು. ಸಾರ್ವಜನಿಕರ ದೂರುಗಳಿಗೆ ಸ್ಪಂದನೆ ಸಿಗಬೇಕು. ಸಮಸ್ಯೆ ಬಗೆಹರಿಯಬೇಕು ಎಂದು ಸೂಚನೆ ನೀಡಿದರು.‌

ನಗರಸಭೆಯಲ್ಲಿರುವ ಸಿಬ್ಬಂದಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಲಭ್ಯವಿರುವ ಯಂತ್ರಗಳನ್ನು ಬಳಕೆ ಮಾಡಬೇಕು. ಪೌರ ಕಾರ್ಮಿಕರ ಸಂಖ್ಯೆ ಹೆಚ್ಚು ಮಾಡುವುದರ ಬದಲಾಗಿ, ಆಧುನಿಕ ಯಂತ್ರಗಳನ್ನು ಬಳಸಿಕೊಂಡು ನಗರದ ಸ್ವಚ್ಛತೆ ಮಾಡಬೇಕು ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯರ ಕೈಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ತಾಂತ್ರಿಕವಾಗಿ ಅಧಿಕಾರ ಚಲಾಯಿಸಲು ಅಡ್ಡಿಗಳಿದ್ದರೂ ಅವರೆಲ್ಲರೂ ಜನರಿಂದ ಆಯ್ಕೆಯಾದವರು. ಜನರಿಗೆ ಹೆಚ್ಚು ಹತ್ತಿರವಾದವರು. ಹಾಗಾಗಿ, ಕೌನ್ಸಿಲರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆಗಳನ್ನು ಪರಿಗಣಿಸಿ ಕೆಲಸ ಮಾಡಬೇಕು ಎಂದು ಡಿಸಿ ಕಿವಿಮಾತು ಹೇಳಿದರು.

ನಗರಸಭೆಯಲ್ಲಿ ಜನಪ್ರತಿನಿಧಿಗಳು ಕೂರಲು ವ್ಯವಸ್ಥೆಯಾಗಬೇಕು. ವಾರ್ಡ್‌ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಸಮಯಾವಕಾಶ ಕೊಡಬೇಕು ಎಂದು ಡಿಸಿ ನಗರಸಭೆ ಕಮೀಷನರ್‌ ಆನಂದ್ ಸಿ.ಕಲ್ಲೋಳಿಕರ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಚರ್ಚೆಯಾದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಉಡುಪಿಯನ್ನು ಸುಂದರ ಹಾಗೂ ಸ್ಚಚ್ಛ ನಗರವನ್ನಾಗಿ ಮಾಡಲು ಅಧಿಕಾರಿಗಳು ಕೈಜೋಡಿಸಬೇಕು. ಸಾರ್ವಜನಿಕರ ದೂರುಗಳು ನಗರಸಭೆ ಹಂತದಲ್ಲೇ ಬಗೆಹರಿಯಬೇಕು. ಜಿಲ್ಲಾಧಿಕಾರಿ ಕಚೇರಿವರೆಗೂ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದರು.

ಇದಕ್ಕೂ ಮುಂಚೆ ಸಭೆಯಲ್ಲಿ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಹೇಳಿಕೊಂಡರು. ಸದಸ್ಯ ಪ್ರಭಾಕರ್ ಪೂಜಾರಿ ಮಾತನಾಡಿ, ‘ಚುನಾವಣೆ ನಡೆದು 1 ವರ್ಷ ಕಳೆದರೂ ಜನಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರಮೇಶ್ ಕಾಂಚನ್ ಮಾತನಾಡಿ, ನಗರದಲ್ಲಿ ಬೀದಿದೀಪಗಳು ಕೆಟ್ಟು ನಿಂತಿವೆ. ಕತ್ತಲಾಗುತ್ತಿದ್ದಂತೆ ಜನರು ಹೊರಬರಲು ಹೆದರುತ್ತಿದ್ದಾರೆ. ಮನೆಗಳಿಗೆ ಕಂಪ್ಲಿಷನ್ ಸರ್ಟಿಫಿಕೇಟ್ ದೊರೆಯುತ್ತಿಲ್ಲ ಎಂದು ದೂರಿದರು.

ಸುಮಿತ್ರಾ ನಾಯಕ್ ಮಾತನಾಡಿ, ಪೌರ ಕಾರ್ಮಿಕರ ಕೊರತೆ ಇದೆ, ನಗರದ ಚರಂಡಿ ಹೂಳೆತ್ತಿಲ್ಲ ಎಂದರು. ರಮೇಶ್‌ ಅಂಚನ್ ಮಾತನಾಡಿ, ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು ಎಂದರು.

ಮರಳು ಸಮಸ್ಯೆಯಿಂದ ವಸತಿ ಯೋಜನೆಗಳು ಪೂರ್ಣಗೊಂಡಿಲ್ಲ. ಆರ್ಥಿಕತೆ ಕುಸಿಯುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ ಎಂದು ಬಾಲಕೃಷ್ಣ ಶೆಟ್ಟಿ ದೂರಿದರು.

ಕೊಡವೂರು ಭಾಗದಲ್ಲಿ ಚರಂಡಿಯಲ್ಲಿ ಹೊಲಸು ತುಂಬಿಕೊಂಡು ಮಲೇರಿಯಾ, ಡೆಂಗಿ, ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ವರ್ಣಾ ನದಿ ಹೂಳೆತ್ತುವುದು, ಯುಜಿಡಿ ವ್ಯವಸ್ಥೆ, ನಗರಕ್ಕೆ ಹೆಚ್ಚುವರಿ ಸಕ್ಕಿಂಗ್ ಯಂತ್ರಗಳ ಖರೀದಿ, ಇಂದ್ರಾಳಿ ಹೊಳೆಯ ಹೂಳೆತ್ತುವುದು, ಯುಜಿಡಿ ಹೊಲಸು ಅಂತರ್ಜಲ ಸೇರದಂತೆ ತಡೆ, ಬಜೆ ನೀರು ಪೂರೈಕಾ ಘಟಕಕ್ಕೆ ನಿರಂತರ ವಿದ್ಯುತ್ ಸರಬರಾಜು, ಕೊರಗರ ಕಾಲೊನಿಗೆ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳು ಸಭೆಯಲ್ಲಿ ಚರ್ಚೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT