ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 0.9ಕ್ಕಿಳಿದ ಕೋವಿಡ್ ಪಾಸಿಟಿವಿಟಿ ದರ

ನವರಾತ್ರಿ ಆಚರಣೆ ವೇಳೆ ಮೈರೆಯದೆ ಸುರಕ್ಷತಾ ಕ್ರಮ ಪಾಲಿಸಿ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌
Last Updated 7 ಅಕ್ಟೋಬರ್ 2021, 15:13 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಕುಸಿಯುತ್ತಿದ್ದು, ಕಳೆದ 1 ವಾರದ ಅಂಕಿ ಅಂಶಗಳ ಪ್ರಕಾರ ಶೇ 0.9ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಗುರುವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ‘ಕಳೆದ 14 ದಿನಗಳ ಸರಾಸರಿ ಪಾಸಿಟಿವಿಟಿ ದರ ಶೇ 1.1ರಷ್ಟಿದ್ದು, ಸೋಂಕು ಮತ್ತಷ್ಟು ಇಳಿಕೆಗೆ ಜಿಲ್ಲಾಡಳಿತ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಿದೆ. ಕೇರಳ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರಿಗೆ 72 ಗಂಟೆಗಳು ಮೀರದ ಕೋವಿಡ್‌ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ನವರಾತ್ರಿ ಉತ್ಸವ ಆರಂಭವಾಗಿದ್ದು, ಸಾರ್ವಜನಿಕರು ಕೋವಿಡ್‌ ಸಮುಚಿತ ವರ್ತನೆಗಳನ್ನು ಪಾಲಿಸಿ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.

ಕೋವಿಡ್‌ ಮೊದಲ ಡೋಸ್‌ ಲಸಿಕೆ ಗುರಿ ಪೂರ್ಣಗೊಳಿಸಿದ ರಾಜ್ಯದ ಎರಡನೇ ಜಿಲ್ಲೆ ಎಂಬ ಹೆಗ್ಗಳಿಕೆಗೆ ಉಡುಪಿ ಪಾತ್ರವಾಗಿದೆ. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 9,01,568 ಮಂದಿಗೆ ಕೋವಿಡ್ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇದಕ್ಕೆ ಪ್ರತಿಯಾಗಿ 9,08,618 ಮಂದಿಗೆ ಲಸಿಕೆ ಹಾಕಲಾಗಿದ್ದು ಶೇ 101ರಷ್ಟು ಗುರಿ ಸಾಧಿಸಲಾಗಿದೆ. ಶೇ 48.6ರಷ್ಟು ಜನರಿಗೆ ಎರಡನೇ ಡೋಸ್ ನೀಲಾಗಿದ್ದು, ಶೀಘ್ರ ಶೇ 100 ಗುರಿ ಮುಟ್ಟಲಾಗುವುದು ಎಂದರು.

ನಷ್ಟವಾಗದಂತೆ ಲಸಿಕೆ ಹಾಕಿದ ಜಿಲ್ಲೆಗಳಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ನಷ್ಟದ ಪ್ರಮಾಣ ಕೇವಲ ಶೇ 0.5ರಷ್ಟಿದೆ. ಶುಕ್ರವಾರ ಲಸಿಕಾ ಮಹಾಮೇಳ ನಡೆಯುತ್ತಿದ್ದು, ಎರಡನೇ ಡೋಸ್ ಬಾಕಿ ಇದ್ದವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

ಫ್ರೂಟ್ಸ್‌ ತಂತ್ರಾಂಶ ಶೇ 38.38 ನೋಂದಣಿ:ಸರ್ಕಾರದ ಯೋಜನೆಗಳು ಅರ್ಹ ರೈತರಿಗೆ ಸಿಗಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಫ್ರೂಟ್ಸ್ ತಂತ್ರಾಂಶ ಸಿದ್ಧಪಡಿಸಿದ್ದು, ಎಲ್ಲ ರೈತರು ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 9,12,936 ಪ್ಲಾಟ್ಸ್‌ಗಳನ್ನು ಗುರುತಿಸಲಾಗಿದ್ದು, ಇದುವರೆಗೂ ಫ್ರೂಟ್ಸ್ ತಂತ್ರಾಂಶದಡಿ 3,50,393 ಫ್ಲಾಟ್ಸ್‌ ನೋಂದಣಿಯಾಗಿದ್ದು, ಶೇ 38.38ರಷ್ಟು ಮಾತ್ರ ಪ್ರಗತಿಯಾಗಿದೆ. ರೈತರು ತಂತ್ರಾಂಶದಲ್ಲಿ ಆಧಾರ್ ಕಾರ್ಡ್‌ ಲಿಂಕ್ ಮಾಡಿಸಿಕೊಳ್ಳುವ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಇದ್ದರು.

ಬೆಳೆ ಸಮೀಕ್ಷೆ: ಶೇ 91 ಪೂರ್ಣ

2021–22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷಾ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು, 9,21,434 ಫ್ಲಾಟ್‌ಗಳಲ್ಲಿ 8,37,082 ಫ್ಲಾಟ್‌ಗಳಲ್ಲಿ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು ಶೇ 91ರಷ್ಟು ಪ್ರಗತಿಯಾಗಿದೆ. ಬೆಳೆ ಸಮೀಕ್ಷೆಗೆ ಅ.15ರವರೆಗೆ ಮಾತ್ರ ಕಾಲಾವಕಾಶವಿದ್ದು, ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ ಖಾರಿಫ್ ಸೀಸನ್‌ ಫಾರ್ಮರ್ ಕ್ರಾಪ್ ಸರ್ವೆ–2021–22 ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಆಧಾರ್ ವಿವರ ನಮೂದಿಸಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು. ಇದರಿಂದ ಬೆಳೆ ವಿಮೆ, ಬೆಳೆ ಹಾನಿ, ಬೆಂಬಲ ಬೆಲೆ, ಸರ್ಕಾರದ ಪರಿಹಾರ, ಯೋಜನೆಗಳ ಸದುಪಯೋಗ ಪಡೆಯಲು ಸಹಕಾರಿ.

‘ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿ’

ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಬಹುದು. ರಸಗೊಬ್ಬರ ಸಬ್ಸಿಡಿ, ತೋಟಗಾರಿಕಾ ಇಲಾಖೆಯ ಸಹಾಯಧನ, ಬೆಳೆ ಸಾಲ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ರೈತರು ಆಧಾರ್ ಸಂಖ್ಯೆ ಹಾಗೂ ಪಹಣಿ ಸಂಖ್ಯೆಯ ಮಾಹಿತಿ ನೀಡುವ ಮೂಲಕ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಅ.7ರಿಂದ 10ರವರೆಗೆ ಜಿಲ್ಲೆಯಾದ್ಯಂತ ಫ್ರೂಟ್ಸ್‌ ತಂತ್ರಾಂಶ ನೋಂದಣಿ ಅಭಿಯಾನ ನಡೆಯುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT