ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಬಿಟ್ಟು, ಸರ್ಕಾರದ ಬಸ್‌ ಏರಿದ ಡಿಸಿ

ಸಮೂಹ ಸಾರಿಗೆ ಬಳಕೆಗೆ ಮುನ್ನುಡಿ ಬರೆದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
Last Updated 30 ಮೇ 2019, 15:33 IST
ಅಕ್ಷರ ಗಾತ್ರ

ಉಡುಪಿ: ನಿತ್ಯ ಹವಾನಿಯಂತ್ರಿತ ವಾಹನದಲ್ಲಿ ಓಡಾಡುತ್ತಿದ್ದ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಗುರುವಾರ ಸಮೂಹ ಸಾರಿಗೆ ಬಳಸಿ ಪರಿಸರ ಕಾಳಜಿ ಪ್ರದರ್ಶಿಸಿದರು.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಮಾರ್ಗದರ್ಶನದಂತೆ ಅಧಿಕಾರಿಗಳು ಇಲಾಖೆಯ ಕಾರು ಹಾಗೂ ಸ್ವಂತ ವಾಹನವನ್ನು ಮನೆಯಲ್ಲಿ ಬಿಟ್ಟು, ವಾರ್ತಾ ಇಲಾಖೆಯ ಮಿನಿ ಬಸ್‌ನಲ್ಲಿ ಕಚೇರಿಗೆ ಬಂದು ಗಮನ ಸೆಳೆದರು.

ಸ್ವತಃ ಜಿಲ್ಲಾಧಿಕಾರಿಗಳು ಅಧಿಕೃತ ಸರ್ಕಾರಿ ವಾಹನವನ್ನು ಮನೆಯಲ್ಲಿ ಬಿಟ್ಟುಗುರುವಾರ ಬೆಳಿಗ್ಗೆ 9.30ಕ್ಕೆ ಕಾರಿನ ಚಾಲಕ ಹಾಗೂ ಅಂಗರಕ್ಷಕನ ಜತೆ ಮಿನಿ ಬಸ್‌ ಏರಿದರು. ಜಿಲ್ಲಾಧಿಕಾರಿ ನಿವಾಸದ ಪಕ್ಕದಲ್ಲೇ ಇರುವ ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರೂ ಜಿಲ್ಲಾಧಿಕಾರಿಗೆ ಸಾಥ್ ನೀಡಿದರು.

ಅಜ್ಜರಕಾಡು ವಸತಿಗೃಹದಲ್ಲಿರುವ ವಿವಿಧ ಇಲಾಖೆಯ ಅಧಿಕಾರಿಗಳು ಸಹ ಬಸ್‌ ಏರಿದರು. ಜಿಲ್ಲಾಧಿಕಾರಿ ನಿವಾಸದಿಂದ ಹೊರಟ ಬಸ್‌, ಬನ್ನಂಜೆಯ ತಾಲ್ಲೂಕು ಕಚೇರಿ, ಸಿಟಿ ಬಸ್ ನಿಲ್ದಾಣ, ಎಂಜಿಎಂ ಕಾಲೇಜು ಮಾರ್ಗವಾಗಿ ತೆರಳಿತು. ಈ ಭಾಗಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಕರ್ತವ್ಯಕ್ಕೆ ತೆರಳಲು ಕಾಯುತ್ತಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹತ್ತಿಸಿಕೊಂಡು ಬಸ್‌ ಸಾಗಿತು.

ಬೆಳಿಗ್ಗೆ 9.50ಕ್ಕೆ ಸರಿಯಾಗಿ ಬಸ್‌ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಕರ್ತವ್ಯದ ಅವಧಿ ಮುಗಿದ ಬಳಿಕ ಸಂಜೆ 5.30ಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ ಅದೇ ಬಸ್‌ನಲ್ಲಿ ಮನೆಗೆ ತೆರಳಿದರು.

ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಸಿಬ್ಬಂದಿ ಸಾರ್ವಜನಿಕ ಸಾರಿಗೆ ಬಳಸಬೇಕು. ಇದರಿಂದ ವಾತಾವರಣದಲ್ಲಿ ಇಂಗಾಲದ ಅಂಶ ಕಡಿಮೆಯಾಗುವುದರ ಜತೆಗೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಸಾರ್ವಜನಿಕ ಸಾರಿಗೆಗೂ ಉತ್ತೇಜನ ದೊರೆಯಲಿದೆ ಎಂಬ ಉದ್ದೇಶ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರದ್ದು.

ವಿವಿಧ ಇಲಾಖೆಗಳಲ್ಲಿರುವ ಮಿನಿ ಬಸ್‌ಗಳನ್ನು ಸಮೂಹ ಸಾರಿಗೆ ರೀತಿಯಲ್ಲಿ ಬಳಸಬೇಕು. ಸಾಧ್ಯವಾಗದಿದ್ದರೆ ಬಸ್‌ಗಳಲ್ಲಿ ಕಚೇರಿಗೆ ಬರಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಅದರಂತೆಮುಂದೆ ಪ್ರತಿ ಗುರುವಾರ ಎಲ್ಲಸಿಬ್ಬಂದಿ ಸಮೂಹ ಸಾರಿಗೆ ಬಳಸಲು ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT