ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರಗತಿಗೆ ಪೂರಕ ಕಾರ್ಯಕ್ರಮಗಳ ಅನುಷ್ಠಾನ

ಡಿಡಿಪಿಐ ಎನ್‌.ಎಚ್‌.ನಾಗೂರ ರಚಿತ ಮೂರು ಪುಸ್ತಕಗಳ ಲೋಕಾರ್ಪಣೆ 12ರಂದು
Last Updated 9 ಡಿಸೆಂಬರ್ 2020, 13:51 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಸಂಕಷ್ಟದ ಕಾಲದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್‌.ಎಚ್‌.ನಾಗೂರ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೈಕ್ಷಣಿಕ ಚಿಂತನ ಮಂಥನ ನಡೆಸಿ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ, ಮೇಲ್ವಿಚಾರಣೆ ಕುರಿತು ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ವಿವರ ನೀಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಬಲವರ್ಧನೆಗೆ ಕಾರ್ಯಸೂಚಿ ಸಿದ್ಧಪಡಿಸಲಾಗಿದ್ದು, ಪರೀಕ್ಷಾ ದೃಷ್ಟಿಯಿಂದ ಹಾಗೂ ಕಲಿಕಾ ನಿರಂತರ ಕಾಪಾಡಿಕೊಳ್ಳಲು ಪ್ರತಿ ಶಾಲೆಯಲ್ಲಿ ಮಕ್ಕಳ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲಾಗಿದೆ. ಶೇ 60ಕ್ಕಿಂತ ಕಡಿಎ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು ಫಲಿತಾಂಶ ಹೆಚ್ಚಳಕ್ಕೆ ಮಾರ್ಗದರ್ಶನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಫೋನ್‌ ಇನ್‌ ಕಾರ್ಯಕ್ರಮ: ಮಕ್ಕಳು ಹಾಗೂ ಶಿಕ್ಷಕರ ನಡುವೆ ಸಂವಹನಕ್ಕೆ ವೇದಿಕೆ ಕಲ್ಪಿಸಿಕೊಡಲು ಜನವರಿಯಿಂದ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಜತೆಗೆ, ‘ಪಾಲಕರ ಮನೆ ಭೇಟಿ’ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುವುದು. ಈಗಾಗಲೇ ಡಿಎಸ್‌ಇಆರ್‌ಟಿಯಿಂದ ಸಿದ್ಧಪಡಿಸಿದ ಮುದ್ರಿತ ವಿಡಿಯೋ ಪಾಠಗಳು ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಅಲ್ಲಿ ಮೂಡುವ ಪ್ರಶ್ನೆಗಳಿಗೆ ಶಿಕ್ಷಕರನ್ನು ಸಂಪರ್ಕಿಸಿ ಉತ್ತರ ಪಡೆಯಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಶಿಕ್ಷಕರಿಗೆ ಪ್ರೇರಣಾ ಶಿಬಿರಗಳನ್ನು ಆಯೋಜಿಸಿ ಬೋಧನಾ ಪ್ರಾವಿಣ್ಯತೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

ಪಾಲಕರ ಜವಾಬ್ದಾರಿ, ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಮೂಡಿಸಲು ಜನವರಿ 2ನೇ ವಾರದಲ್ಲಿ ಪಾಲಕರ ಸಭೆ ನಡೆಸಲಾಗುವುದು. ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಮತ್ತಷ್ಟು ಉತ್ತಮಗೊಳಿಸಲು ಒತ್ತು ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಬ್ರಹ್ಮಾವರ ಬಿಇಒ ಒ.ಆರ್‌.ಪ್ರಕಾಶ್‌, ನೆಲ್ಲಿಕಟ್ಟೆ ಮುದ್ರಾಡಿ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಹೆಗ್ಡೆ, ಬ್ರಹ್ಮಾವರದ ಶಿಕ್ಷಣ ಸಂಯೋಜಕ ಬಿ.ಬಿ.ಪ್ರಕಾಶ್‌ ಇದ್ದರು.

‘ಮೂರು ಪುಸ್ತಕಗಳ ಬಿಡುಗಡೆ 12ರಂದು’
ಡಿಡಿಪಿಐ ಎನ್‌.ಎಚ್‌.ನಾಗೂರ ಅವರು ಬರೆದಿರುವ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಡಿ.12ರಂದು ಮಧ್ಯಾಹ್ನ 3ಕ್ಕೆ ಬಡಗಬೆಟ್ಟು ಕೋಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ. ಉದ್ಯಮಿ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಲಿದ್ದಾರೆ. ‘ಶಿಕ್ಷಣ ಸಿರಿ’ ಪುಸ್ತಕವನ್ನು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್‌, ‘ಅಕ್ಷರ ಅಂಬಾರಿ’ ಪುಸ್ತಕವನ್ನು ಅಂಕಣಕಾರ ಸುರೇಂದ್ರನಾಥ್ ಶೆಟ್ಟಿ, ‘ಪುರಾತನ ಶರಣ ಬಾವೂರ ಬೊಮ್ಮಯ್ಯ’ ಪುಸ್ತಕವನ್ನು ಬ್ರಹ್ಮಾವರ ಬಿಇಒ ಪ್ರಕಾಶ್ ಬಿಡುಗಡೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT