ಬುಧವಾರ, ನವೆಂಬರ್ 13, 2019
25 °C
ಸಾಹಿತಿ ಜಿ.ಕೆ.ಐತಾಳ್‌ ವಿಧಿ ವಶ

ಮರೆಯಾದ ಕರಾವಳಿಯ ‘ರಂಗ’ ಕೊಂಡಿ

Published:
Updated:
Prajavani

ಕುಂದಾಪುರ: ಮೊನಚು ಬರಹಗಳಿಂದ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಹಿರಿಯ ಸಾಹಿತಿ ಹಾಗೂ ನಿವೃತ್ತ ಬ್ಯಾಂಕ್‌ ಅಧಿಕಾರಿ ಜಿ.ಕೆ. ಐತಾಳ್‌ (68) ಗುರುವಾರ ಕೋಟೇಶ್ವರದ ಸ್ವಗೃಹದಲ್ಲಿ ನಿಧನರಾದರು.

1951‌ನೇ ಜೂ.25ರಂದು ಜನಿಸಿದ್ದ ಅವರು ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಶಿಕ್ಷಣಾಭ್ಯಾಸ
ಮುಗಿಸಿದ್ದರು. ನಂತರ ಕರ್ಣಾಟಕ
ಬ್ಯಾಂಕ್‌ ಸೇರಿದ್ದ ಜಿ.ಗೋಪಾಲಕೃಷ್ಣ ಐತಾಳರು ವಿಜ್ಞಾನ ಪದವೀಧರರಾಗಿ
ದ್ದರೂ ಕೂಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಮೊದಮೊದಲು ಸಾಮಾನ್ಯ ನಾಟಕ
ವಿಮರ್ಶೆಗಳ ಮೂಲಕ ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿನ ಆಸಕ್ತಿ, ರಂಗ ಚಟುವಟಿಕೆಯ ಮೇಲೆ ಅವರಿಗಿದ್ದ ಮೋಹ ಬಹು ಬೇಗನೆ ಅವರನ್ನು ವೃತ್ತಿಪರ ಬರಹಗಾರರನ್ನಾಗಿಸಿತ್ತು.

ಜಿ.ಕೆ. ಐತಾಳರ ಬರಹಗಳಲ್ಲಿನ ವಾಕ್ಯಗಳು ಕ್ಲಿಷ್ಟವಾಗಿದ್ದರೂ, ಓದುಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದವು. ಈ ಕಾರಣಕ್ಕಾಗಿಯೇ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅವರದೇ ಆದ ಅಭಿಮಾನಿ ಬಳಗವಿತ್ತು. ‘ನವಭಾರತ’ ಪತ್ರಿಕೆಯಲ್ಲಿ ‘ಕಡಲ ತಡಿಯ ಕಲಾವಿದರು’ ಎನ್ನುವ ಬರಹದ ಮೂಲಕ ಎಲೆಮರೆಯ ಕಲಾವಿದರನ್ನು ಸಮಾಜದ ಮುಖ್ಯಭೂಮಿಕೆಯಲ್ಲಿ ಕರೆ ತರುವ ಪ್ರಯತ್ನ ಮಾಡಿದ್ದರು.

ರಂಗಭೂಮಿ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ಅವರ ರಂಗಾಸಕ್ತಿಯನ್ನು ಗಮನಿಸಿದ್ದ ಜಿಲ್ಲೆಯ
ಪ್ರಸಿದ್ಧ ರಂಗಾಸಕ್ತ ಸಂಸ್ಥೆಗಳು ತಮ್ಮಲ್ಲಿನ ರಂಗ ಚಟುವಟಿಕೆಯ ಮುಖ್ಯ
ಭೂಮಿಕೆಯಲ್ಲಿ ಐತಾಳರನ್ನು ಗುರುತಿಸು
ತ್ತಿದ್ದರು. ಉಡುಪಿಯ ರಂಗಭೂಮಿ, ಬೈಂದೂರಿನ ಲಾವಣ್ಯ, ಕೋಟ ಮಿತ್ರ ಮಂಡಳಿ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ಸಂಸ್ಥೆಗಳು ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿರುತ್ತಿದ್ದರು.

ಅವರ ನಾಟಕ ವಿಮರ್ಶಾ ಲೇಖನಗಳು ರಾಜ್ಯದ ಪ್ರಮುಖ ದಿನಪತ್ರಿಕೆ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಸಮರ್ಪಣ’, ‘ಕಾಟುಮೂಲೆ ಎಸ್ಟೇಟ್‌’, ‘ಕುಜ’, ‘ಮಿನುಗು ಮಿನುಗೆಲೆ ನಕ್ಷತ್ರ’, ‘ಮೇರೆ ಭಾರತ್ ಮಹಾನ್’ ಕಾದಂಬರಿಗಳು ಪ್ರಕಟವಾಗಿದ್ದವು.

ಅನಕೃ ಅವರ ನೆನಪಿನಲ್ಲಿ ಕಾದಂಬರಿಕಾರರಿಗಾಗಿ ಸ್ಥಾಪಿಸಿದ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿ ಪಡೆದ ಹಿರಿಮೆ ಅವರದ್ದಾಗಿತ್ತು.

ಸಣ್ಣ ಕಥೆ, ದೊಡ್ಡ ಕಥೆ, ಕಥಾ ಸಂಕಲನಗಳ ಬರವಣಿಗೆ ಮಾಡಿದ್ದ ಅವರು ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದರು. ಅವರ ನಿರ್ದೇಶನದ ‘ನಾವಿಲ್ಲದಾಗ’ ನಾಟಕಕ್ಕೆ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಯಲ್ಲಿ 9 ಪ್ರಶಸ್ತಿಗಳು, ‘ಥ್ಯಾಂಕ್ಯೂ ಮಿ. ಗ್ಲಾಡ್‌’ ನಾಟಕಕ್ಕೆ ಆರು ಪ್ರಶಸ್ತಿಗಳು ಹಾಗೂ ‘ಗುಡ್ ಬೈ ಡಾಕ್ಟರ್‌’ ನಾಟಕಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ.

2002ರಲ್ಲಿ ಜೀವಮಾನ ಸಾಧನೆಗಾಗಿ ಐತಾಳರಿಗೆ ‘ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಪ್ರತಿಕ್ರಿಯಿಸಿ (+)