ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪು: ಚೀನಾ ಗೂಡು ದೀಪದ ಮಧ್ಯೆಯೂ ಸಾಂಪ್ರದಾಯಿಕ ಗೂಡುದೀಪ ತಯಾರಿ

Last Updated 23 ಅಕ್ಟೋಬರ್ 2019, 11:48 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಚೀನಾ ನಿರ್ಮಿತ ಗೂಡು ದೀಪಗಳ ಪೈಪೋಟಿ ಮಧ್ಯೆಯೂ ಬಿದಿರಿನ ಕಡ್ಡಿ ಉಪಯೋಗಿಸಿ ಬಣ್ಣದ ಪೇಪರಿನ ಮೂಲಕ ನಾನಾ ಚಿತ್ತಾರಗಳ ಮೂಲಕ ಸಾಂಪ್ರದಾಯಿಕ ಗೂಡುದೀಪ ರಚಿಸಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.

ದೀಪಾವಳಿ ಹಬ್ಬಕ್ಕೆ ಮನೆ ಮನೆಗಳನ್ನು, ಅಂಗಡಿ ಮುಂಗಟ್ಟುಗಳನ್ನು ದೀಪಗಳಿಂದ ಅಲಂಕರಿಸಿ, ಪಟಾಕಿ ಸಿಡಿಸಿ ಸಂಭ್ರಮ ಪಡುತ್ತಾರೆ. ತುಳುನಾಡಿನಲ್ಲಿ ಜನರು ಮನೆಗಳಲ್ಲಿ ಸಾಂಪ್ರದಾಯಿಕ ಗೂಡು ದೀಪಗಳನ್ನು ಬೆಳಗಿ ದೀಪಾವಳಿ ಆಚರಿಸುತ್ತಾರೆ.

ಆದರೆ, ಈಗ ಎಲ್ಲೆಲ್ಲೂ ಚೀನಾ ನಿರ್ಮಿತ ಬಣ್ಣ ಬಣ್ಣದ ಗೂಡು ದೀಪವೇ ಕಂಡು ಬರುತ್ತಿದೆ. ಇದರಿಂದ ಸಾಂಪ್ರದಾಯಿಕ ಗೂಡುದೀಪ ಮರೆಯಾಗುತ್ತಿದೆ. ಚೀನಾ ನಿರ್ಮಿತ ಗೂಡುದೀಪಗಳಿಂದ ಸಾಂಪ್ರದಾಯಿಕವಾಗಿ ಗೂಡು ದೀಪವನ್ನೇ ಕಸುಬನ್ನಾಗಿಸಿ ಜೀವನ ಸಾಗಿಸುವ ಜನರಿಗೆ ಆದಾಯ ಇಲ್ಲದಂತಾಗಿದೆ. ಈ ನಡುವೆ, ಹಲವಾರು ಮಂದಿ ಹಿಂದಿನಿಂದ ಮಾಡಿಕೊಂಡು ಬಂದ ಕಸುಬನ್ನು ಇನ್ನೂ ಕೈ ಕಸುಬನ್ನು ಮುಂದುವರಿಸಿದ್ದಾರೆ.

ಕಾಪು ಜನಾರ್ದನ ದೇವಳದ ಬಳಿ ಅಂಗಡಿ ಇರಿಸಿ ವ್ಯಾಪಾರ ಮಾಡಿಕೊಂಡಿರುವ ಸುಬ್ರಾಯ ಕಾಮತ್ ಸಾಂಪ್ರದಾಯಿಕ ಗೂಡು ದೀಪ ರಚಿಸುವಲ್ಲಿ ಎತ್ತಿದ ಕೈ. ಕಾಮತರು ದೀಪಾವಳಿಗೆ ಒಂದೆರಡು ತಿಂಗಳಿರುವಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿ ಗೂಡುದೀಪ ರಚನೆಗೆ ತೊಡಗುತ್ತಾರೆ. ಗ್ರಾಹಕರ ಕೈಗೆಟಕುವ ದರದಲ್ಲಿ ಗೂಡುದೀಪಗಳನ್ನು ರಚಿಸಿ ಮಾರಾಟ ಮಾಡುತ್ತಾರೆ. ಪ್ರತಿ ವರ್ಷ ಇವರ ಗ್ರಾಹಕರು ಮುಂಗಡವಾಗಿ ಕಾಮತರಲ್ಲಿ ಸಾಂಪ್ರದಾಯಿಕ ಗೂಡುದೀಪಗಳನ್ನು ಕಾಯ್ದಿರಿಸುತ್ತಾರೆ. ಇವರು ಬಿಡುವಿಲ್ಲದ ತಮ್ಮ ವ್ಯಾಪಾರದ ನಡುವೆಯೂ ಹಿಂದಿನಿಂದಲೂ ಮಾಡಿಕೊಂಡ ಕಾಯಕವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಲಾಭದ ದೃಷ್ಟಿಯನ್ನು ಹೊರತುಪಡಿಸಿ ಕಳೆದ 25ವರ್ಷಗಳಿಂದ ಕೈಯಾರೆ ಮಾಡಿಕೊಂಡು ಬಂದಿರುವ ಸಾಂಪ್ರದಾಯಿಕ ಗೂಡು ದೀಪವನ್ನು ಮಾಡಿಕೊಂಡು ಮುಂದುವರಿಸಿದ್ದಾರೆ.

‘ನಾನು ಇಪ್ಪತ್ತೈದು ವರ್ಷಗಳಿಂದ ಮಾಡಿಕೊಂಡು ಬಂದ ಈ ಕಸುಬನ್ನು ಬಿಡುವ ಮನಸ್ಸಿಲ್ಲ. ಈಗ ಮಾರುಕಟ್ಟೆಗೆ ಬಂದ ಗೂಡುದೀಪಗಳೆಲ್ಲ ಪರಿಸರಕ್ಕೆ ಮಾರಕ. ನಾನು ತಯಾರಿಸುವ ಈ ಸಾಧನ ಪರಿಸರ ಸ್ನೇಹಿಯಾಗಿರುತ್ತದೆ. ಹೀಗಾಗಿ ಈ ಕಾಯಕದಲ್ಲಿ ನನಗೆ ಸಮಾಧಾನವಿದೆ. ಮೊದಮೊದಲು ಮಾಡಿದ ಗೂಡುದೀಪಗಳು ವಿಕ್ರಯಿಸಿ ಮತ್ತೆ ಬಂದ ಗ್ರಾಹಕರಿಗೆ ಸಿಗುತಿರಲ್ಲಿಲ್ಲ. ಆದರೆ ಈಗ ಬೇಡಿಕೆ ಕಡಿಮೆಯಾಗಿ ವರ್ಷದಿಂದ ವರ್ಷಕ್ಕೆ ಕಡಿಮೆ ತಯಾರು ಮಾಡುತ್ತೇನೆ. ಮೊದಲು ನಾನಾ ತರಹದ ಗೂಡುದೀಪಗಳನ್ನು ರಚಿಸುತ್ತಿದ್ದೆ. ಈಗ ಬೇಡಿಕೆ ಕಡಿಮೆಯಾಗಿದ್ದರಿಂದ ಅದೆಲ್ಲಾ ಮಾಡದೆ ಸಾಧಾರಣ ಗೂಡು ದೀಪಗಳನ್ನೇ ಸಿದ್ಧಪಡಿಸಿ ಮಾರಾಟ ಮಾಡುತಿದ್ದೇನೆ’ ಎನ್ನುತ್ತಾರೆ ಸುಬ್ರಾಯ ಕಾಮತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT