ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಹಬ್ಬ ಯಶಸ್ವಿ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಕಳೆದ ಬಾರಿಗಿಂತ ಹೆಚ್ಚು ಮತದಾನ, ಸಿಬ್ಬಂದಿ ಶ್ರಮಕ್ಕೆ ಶ್ಲಾಘನೆ
Last Updated 24 ಏಪ್ರಿಲ್ 2019, 16:33 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನಲ್ಲಿ ಯಶಸ್ವಿಯಾಗಿ ಚುನಾವಣೆ ನಡೆದಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಬುಧವಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಜಿಲ್ಲಾಡಳಿತ ಅಭಿನಂದನೆ ಸಲ್ಲಿಸುತ್ತದೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೂ ಸಿ‌ಬ್ಬಂದಿಯ ಸಹಕಾರ ಅಗತ್ಯ ಎಂದರು.

ಮತದಾನ ಮುಗಿದ ಬಳಿಕ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 865 ಮತಯಂತ್ರ, ವಿವಿ ಪ್ಯಾಟ್‌ ಹಾಗೂ ಇತರ ದಾಖಲಾತಿಗಳನ್ನು ಉಡುಪಿಯ ಸೇಂಟ್‌ ಸಿಸಿಲಿಸ್ ಶಾಲೆಯ ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ 246 ಮತಯಂತ್ರಗಳನ್ನು ಬಿಗಿಭದ್ರತೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ತಲುಪಿಸಲಾಗಿದೆ ಎಂದು ತಿಳಿಸಿದರು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ 40 ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಶೇ 72.05ರಷ್ಟು ಮತದಾನವಾಗಿದೆ. ಚಿಕ್ಕಮಗಳೂರಿಗೆ ಹೋಲಿಸಿದರೆ ಉಡುಪಿಯ ಸಖಿಮತಗಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ ಎಂದರು.

4 ಅಂಗವಿಕಲರ ಮತಗಟ್ಟೆಯಲ್ಲಿ ಶೇ 75.85ರಷ್ಟು ಮತದಾನವಾಗಿದೆ. 3 ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಶೇ 80.59ರಷ್ಟು ಮತದಾನ ನಡೆದಿದೆ. 2014ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಶೇ 1.45ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಸ್ವಲ್ಪ ಕಡಿಮೆಯಾಗಿದೆ ಎಂದರು.

ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ 15 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ₹ 25,30,910 ನಗದು ವಶಪಡಿಸಿಕೊಳ್ಳಲಾಗಿತ್ತು. ದಾಖಲೆಗಳನ್ನು ಪಡೆದು ಎಲ್ಲ ಹಣವನ್ನು ಮರಳಿಸಲಾಗಿದೆ. ಚುನಾವಣೆ ಸಂದರ್ಭ 115 ಪ್ರಕರಣ ದಾಖಲಾಗಿದ್ದು, 112 ಪ್ರಕರಣ ವಿಲೇವಾರಿಯಾಗಿದೆ. 16 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.

ಸಿವಿಜಿಲ್ ಆ್ಯಪ್ ಮೂಲಕ ದಾಖಲಾದ 273 ದೂರುಗಳ ಪೈಕಿ 225 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. 48 ಡಮ್ಮಿ ಪ್ರಕರಣಗಳಾಗಿವೆ. ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 70 ಮರಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ವೆಬ್‌ಕಾಸ್ಟಿಂಗ್ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ರಾಜ್ಯಕ್ಕೆ ಪ್ರಥಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾತನಾಡಿ, ಭದ್ರತಾ ಸಿಬ್ಬಂದಿಯ ಶ್ರಮದಿಂದ ಶಾಂತಿಯುತ ಚುನಾವಣೆ ನಡೆದಿದೆ. ಡಿಎಸ್‌ಪಿ ದರ್ಜೆಯ ಅಧಿಕಾರಿಗಳು, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐ, ಕಾನ್‌ಸ್ಟೆಬಲ್‌, ಗೃಹರಕ್ಷಕ ದಳ ಸಿಬ್ಬಂದಿ, ಅರಣ್ಯ ಇಲಾಖೆಯ ಗಾರ್ಡ್ಸ್‌, ಜೈಲಿನ ವಾರ್ಡನ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದರು.

ಮೊದಲ ಹಂತದ ಚುನಾವಣೆಯಲ್ಲಿ ಎರಡು ಐಟಿಬಿಪಿ ತಂಡ, ನಾಲ್ಕು ಕೆಎಸ್ಆರ್‌ಪಿ ತುಕಡಿ ಬಳಸಿಕೊಳ್ಳಲಾಗಿತ್ತು. ಬೈಂದೂರು ಚುನಾವಣೆಯಲ್ಲಿ ಎಸ್‌ಎಪಿಜಿ ತಂಡ, ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದರು.‌

ಮತ ಎಣಿಕೆ ಮುಗಿಯುವವರೆಗೂ ಸ್ಟ್ರಾಂಗ್ ರೂಂಗಳ ಸುತ್ತ 3 ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಮೀಸಲು ಪಡೆ, ರಾಜ್ಯ ಮೀಸಲು ಪಡೆ, ಸ್ಥಳೀಯ ಪೊಲೀಸರನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದೆ. ಸ್ಟ್ರಾಂಗ್ ರೂಂಗಳ ಸುತ್ತ 105 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ನೇರ ನಿಗಾ ವ್ಯವಸ್ಥೆ ಮಾಡಲಾಗಿದೆ ಎಂದರು.

ಚುನಾವಣಾ ದಿನ 4 ಪ್ರಕರಣ ದಾಖಲಾಗಿದ್ದು, ಮೂರು ಕಾಪು ವ್ಯಾಪ್ತಿಯಲ್ಲಿ ನಡೆದಿದೆ. ಪಡುಬಿದ್ರಿಯಲ್ಲಿ ವ್ಯಕ್ತಿಯೊಬ್ಬರು ಚಾಲೆಂಜ್ ವೋಟ್ ಮಾಡಿದ್ದು ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದರು.

ಬೈಂದೂರು ಚುನಾವಣೆ ಸಂದರ್ಭ ಗಂಗೊಳ್ಳಿಯಲ್ಲಿ 3, ಬೈಂದೂರಿನಲ್ಲಿ 2 ದೂರುಗಳು ದಾಖಲಾಗಿವೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.

**

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಒಟ್ಟು ಮತದಾರರು–15,13,231

ಮತದಾನ ಮಾಡಿದವರು–11,48,700

ಬೈಂದೂರಿನಲ್ಲಿ ಒಟ್ಟು ಮತದಾರರು–2,26,587

ಮತ ಚಲಾಯಿಸಿದವರು–1,70,460

ಸಖಿ ಮತಗಟ್ಟೆಯಲ್ಲಿ ಮತದಾನ ಪ್ರಮಾಣ–26,930

ಅಂಗವಿಕಲರ ಮತಗಟ್ಟೆಯಲ್ಲಿ ಮತದಾನ–2,485

ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಮತ ಪ್ರಮಾಣ–1,732

ದಾಖಲಾದ ಟೆಂಡರ್ ಮತ–4

ಚಾಲೆಂಜ್ ಮತ–1

ಎಪಿಕ್ ಕಾರ್ಡ್‌ ಹಾಜರುಪಡಿಸಿ ಮತದಾನ–9,54,030

ಇತರೆ ದಾಖಲೆ ತೋರಿಸಿ ಮತದಾನ–1,94,670

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT