ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ

7
ಸಾಂತಜ್ಜಿ ಮನೆಗೆ ಹಣ ಬಿಡುಗಡೆಗೊಳಿಸುವ ಭರವಸೆ

ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ

Published:
Updated:
mla visit

ಸಿದ್ದಾಪುರ: ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳ್ಳುಂಜೆ ಮಾವಿನಕೋಡ್ಲು ಟಾರ್ಪಲ್ ಹೊದಿಕೆಯ ಕೊಟ್ಟಿಗೆಯಲ್ಲಿ ಮೂರು ತಲೆಮಾರಿನ ಕುಟುಂಬ ವಾಸಮಾಡುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗೆ ಜಿಲ್ಲಾಧಿಕಾರಿಯಿಂದ ಸಕರಾತ್ಮಕ ಸ್ಪಂದನೆ ದೊರಕಿದೆ.

‘ಸರ್ಕಾರಿ ಸೌಲಭ್ಯಗಳು ದೊರಕದೆ ಸಾಂತಜ್ಜಿಯ ಬದುಕು ಹೈರಣಾಗಿದೆ. ಪಂಚಾಯಿತಿಯಿಂದ ಆಶ್ರಯ ಮನೆ ಮಂಜೂರಾಗಿದ್ದರೂ ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಮನೆಯಲ್ಲಿನ ಕಿತ್ತುತಿನ್ನುವ ಬಡತನದಿಂದಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದೆ, ಪಂಚಾಂಗಕ್ಕೆ ಸೀಮಿತವಾಗಿದೆ’ ಎನ್ನುವ ಕುರಿತು ವಿಸ್ಕೃತ ವರದಿ ಪ್ರಕಟಗೊಂಡಿತ್ತು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ‘ಪ್ರಜಾವಾಣಿ’ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೋಮವಾರವೇ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

‘ಸಾಂತುಬಾಯಿ ಅವರಿಗೆ ಸ್ಥಳದ ದಾಖಲೆಯಿಲ್ಲದಿದ್ದರೂ ಗ್ರಾಮ ಪಂಚಾಯಿತಿ ವಿಶೇಷ ಮುತುವರ್ಜಿ ವಹಿಸಿ ಅವರಿಗೆ ರಾಜೀವ ಗಾಂಧಿ ಯೋಜನೆಯಡಿ ಆಶ್ರಯ ಮನೆ ಭಾಗ್ಯ ಕಲ್ಪಿಸಿದ್ದೇವೆ. ಇತ್ತೀಚಿಗೆ ಅವರು ಮನೆಯ ಪಂಚಾಂಗ ನಿರ್ಮಿಸಿದ್ದು ಅದರ ಜಿಪಿಎಸ್ ಕಾರ್ಯ ಪೂರ್ಣಗೊಂಡಿದೆ. ಅವರ ಖಾತೆಗೆ ಹಣ ಜಮೆಯಾಗುವುದರಿಂದ ಅವರ ಆಧಾರ್ ಕಾರ್ಡ್‌ನಲ್ಲಿನ ಹೆಸರು ವ್ಯತ್ಯಾಸದಿಂದಾಗಿ ಅನುದಾನ ಬಿಡುಗಡೆಗೆ ವಿಳಂಬವಾಗಿದೆ. ಅಲ್ಲದೆ, ಸ್ಥಳೀಯ ವ್ಯಕ್ತಿಯೊಬ್ಬರು ₹ 1800 ಬೆಲೆಯ ಟಾರ್ಪಲು ವ್ಯವಸ್ಥೆಗೊಳಿಸಿದ್ದರು’ ಎಂದು ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕರ ಭೇಟಿ: ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಟರ್ಪಾಲು ಮನೆಯಲ್ಲಿ ವಾಸವಿರುವ ಕುಟುಂಬದ ಸದಸ್ಯರನ್ನು ಭೇಟಿಯಾದರು. ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಮನೆ ನಿರ್ಮಿಸುವ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಸಂತ್ರಸ್ತೆ ಸಾಂತುಬಾಯಿ, ಅವರ ಮಗಳು ಸೀತುಬಾಯಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !