ಬುಧವಾರ, ಸೆಪ್ಟೆಂಬರ್ 18, 2019
26 °C
ರಕ್ತದಾನ ಶಿಬಿರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಕಮಲಾ

ಪರಿಸರ ಆಸಕ್ತಿ ಬೆಳೆಸಿಕೊಳ್ಳಿ

Published:
Updated:
Prajavani

ಉಡುಪಿ: ಪರಿಸರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದರ ಜತೆಗೆ ಪರಿಸರಕ್ಕೆ ನಮ್ಮಿಂದಾಗುವ ಕೊಡುಗೆಯನ್ನು ನೀಡಬೇಕು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಕಮಲಾ ಹೇಳಿದರು.

ಕರ್ನಾಟಕ ರಾಜ್ಯ ಉಪವಲಯ ಅರಣ್ಯಅಧಿಕಾರಿಗಳ ಸಂಘ ಹಾಗೂ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಅರಣ್ಯ ಹುತಾತ್ಮರ ಸ್ಮರಣಾರ್ಥವಾಗಿ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್‌ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಮಕ್ಕಳಿಗೆ ಚಿಕ್ಕಂದಿನಿಂದಲೇ ಪರಿಸರ ಸಂರಕ್ಷಣೆಯ ಅವಶ್ಯಕತೆ ಹಾಗೂ ಕಾಡು ನಾಶದಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಪರಿಸರ ಸಂರಕ್ಷಣೆ ಎನ್ನುವುದು ಮನೆಯಿಂದಲೇ ಆರಂಭ ಆಗಬೇಕು. ಹಿರಿಯರು ನೀಡಿದ ಹಸಿರು ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

‘ಕೇವಲ ಮಾತು, ಚರ್ಚೆಯಿಂದ ಪರಿಸರ ಸಂರಕ್ಷಣೆ ಅಸಾಧ್ಯ. ಪಶ್ಚಿಮಘಟ್ಟದಲ್ಲಿ ಖಾಸಗಿ ಜಾಗವನ್ನು ಗುರುತಿಸಲು ಸಾಧ್ಯವಾಗದಷ್ಟು ದಟ್ಟ ಅರಣ್ಯ ಬೆಳೆದಿದೆ. ಇಷ್ಟು ದಟ್ಟವಾದ ಅರಣ್ಯ ಪ್ರದೇಶವನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಇದನ್ನು ಹಾಗೆಯೇ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆ’ ಎಂದರು.

ಕಾರ್ಯಕ್ರಮನು ಉದ್ಘಾಟಿಸಿ ಉಡುಪಿ ಪವರ್‌ ಕರ್ಪೋರೇಶನ್‌ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಮಾತನಾಡಿ, ಅಭಿವೃದ್ಧಿ ಜತೆಗೆ ಹಸಿರು ಹೊದಿಕೆಯನ್ನು ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯ. ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಕಾಡು ಬೆಳೆಸಿ ಉಳಿಸುವ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಿಸುವ ಕಾರ್ಯ ಶ್ಲಾಘನೀಯ ಎಂದರು.

ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‌, ಡಾ.ಶಶಿಕಲಾ, ಡಾ. ಚಂದ್ರಶೇಖರ್‌, ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜೀವದಾಸ್‌ ಶೆಟ್ಟಿ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌, ರಾಜ್ಯ ಅರಣ್ಯ ರಕ್ಷಕರು ಮತ್ತು ವೀಕ್ಷಕರು ಸಂಘದ ಕುಂದಾಪುರ ಉಪವಿಭಾಗದ ಅಧ್ಯಕ್ಷ ಮಂಜುನಾಥ್‌ ಜಿ. ನಾಯ್ಕ್‌ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಮುಡೂರ ಕೊಠಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್‌ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು. ಎ. ಜಯರಾಮ್‌ ವಂದಿಸಿದರು.

Post Comments (+)