ಯುವಶಕ್ತಿಯ ಕೈಯಲ್ಲಿ ದೇಶದ ಅಭಿವೃದ್ಧಿ

7
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌

ಯುವಶಕ್ತಿಯ ಕೈಯಲ್ಲಿ ದೇಶದ ಅಭಿವೃದ್ಧಿ

Published:
Updated:
Deccan Herald

ಉಡುಪಿ: ದೇಶದ ಹಲವೆಡೆಗಳಿಂದ ಉನ್ನತ ಶಿಕ್ಷಣ ಪಡೆಯಲು ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕದ ವಿಚಾರ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಎಸ್‌ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನದ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಅವರು ಮಾತನಾಡಿದರು.

ವಿಶ್ವದಲ್ಲೇ ಭಾರತ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದ ಜನಸಂಖ್ಯೆಯ ಪೈಕಿ 18ರಿಂದ 35 ವರ್ಷದೊಳಗಿನ ಯುವಶಕ್ತಿ ಶೇ 50ರಷ್ಟಿದೆ. ಈ ಶಕ್ತಿ ಸೃಜನಾತ್ಮಕ ಚಟುವಟಿಕೆಗಳಿಗೆ ಬಳಕೆಯಾದರೆ ಭವ್ಯವಾದ ರಾಷ್ಟ್ರವನ್ನು ನಿರ್ಮಾಣ ಮಾಡಬಹುದು ಎಂದರು.

ಯುವಶಕ್ತಿ ದುಶ್ಚಟಗಳಿಗೆ ಬಲಿಯಾಗಬಾರದು. ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಮಾಧ್ಯಮಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಮಾದಕ ವ್ಯಸನವು ಶ್ರೀಮಂತರು ಹಾಗೂ ಅತಿ ಬಡವರಲ್ಲಿ ಕಂಡುಬರುತ್ತಿದೆ. ಹಣದ ಅಹಂಕಾರ ಹಾಗೂ ಶಿಕ್ಷಣದ ಕೊರತೆ ವ್ಯಸನಕ್ಕೆ ಕಾರಣ. ಕುತೂಹಲಕ್ಕೆ ಆರಂಭವಾಗುವ ದುಶ್ಚಟ ಕ್ರಮೇಣ ವ್ಯಸನವಾಗುತ್ತದೆ. ಔಷದೀಯ ಬಳಕೆಗೆ ಮಾತ್ರ ಡ್ರಗ್ಸ್‌ ಬಳಕೆಗೆ ಅನುಮತಿ ಇದೆ. ಇತರೆ ರೂಪಗಳಲ್ಲಿ ಅದನ್ನು ಬಳಸಲು ಸಂಪೂರ್ಣ ನಿಷೇಧವಿದೆ ಎಂದರು.

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಮಾದಕ ವಸ್ತುಗಳ ಉತ್ಪಾದನೆ ಮೇಲೆ ಕಾನೂನಿನ ನಿಯಂತ್ರಣ ಇಲ್ಲ. ಕಳ್ಳಸಾಗಣೆ ಮೂಲಕ ಭಾರತಕ್ಕೆ ಬರುವ ಮಾದಕ ದ್ರವ್ಯಗಳು ದೇಶದ ಯುವ ಜನತೆಯನ್ನು ನಾಶಮಾಡುತ್ತಿದೆ. ವಿದ್ಯಾರ್ಥಿಗಳು ದುಷ್ಪರಿಣಾಮಗಳ ಕುರಿತು ಜಾಗೃತರಾಗಿ, ಸ್ವಯಂ ನಿಯಂತ್ರಣದಿಂದ ಮಾತ್ರ ವ್ಯಸನ ಮುಕ್ತರಾಗಬಹುದು ಎಂದರು.

ಎರಡು ತಿಂಗಳು ಜಿಲ್ಲೆಯಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಆರಂಭಿಸಲಾಗಿರುವ ‘ಫೇಸ್‌ ಬುಕ್‌’ ಪೇಜ್‌ಗೆ ಎಸ್‌ಪಿ ಚಾಲನೆ ನೀಡಿದರು.

ಉಡುಪಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗಣೇಶ್‌ ಪ್ರಸಾದ್‌ ಪಾಂಡೇಲು, ಜಿಲ್ಲಾ  ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರ್‌ ಚಂದ್ರ ಉಪಸ್ಥಿತರಿದ್ದರು. ಡಿವೈಎಸ್‌ಪಿ ಕುಮಾರ ಸ್ವಾಮಿ ಸ್ವಾಗತಿಸಿದರು, ಪ್ರೆಸ್‌ ಕ್ಲಬ್‌ ಸಂಚಾಲಕ ನಾಗರಾಜ್‌ ರಾವ್‌ ವಂದಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !