ಮಂಗಳವಾರ, ಏಪ್ರಿಲ್ 20, 2021
29 °C
ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಗೆ ಕಟ್ಟೆಚ್ಚರ: ಡಿಎಚ್‌ಒ ಸುಧೀರ್ ಚಂದ್ರ ಸೂಡ

ಮುಂಬೈ, ಕೇರಳದಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮುಂಬೈ ಹಾಗೂ ಕೇರಳದಿಂದ ಉಡುಪಿಗೆ ಆಗಮಿಸುವವರು ಗಡಿಯಲ್ಲಿ ಕಡ್ಡಾಯವಾಗಿ ಕೋವಿಡ್‌ ಪ್ರಮಾಣ ಪತ್ರ ಹಾಜರುಪಡಿಸಬೇಕು ಎಂದು ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೋವಿಡ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎರಡೂ ರಾಜ್ಯಗಳಿಂದ ಬರುವವರು 72 ಗಂಟೆ ಮೀರದಂತೆ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರ ನೀಡಬೇಕು. ವರದಿ ನೆಗೆಟಿವ್ ಇದ್ದರೆ 7 ದಿನ ಹೋಂ ಕ್ವಾರಂಟೈನ್‌ ಇರಬೇಕು ಎಂದು ಡಿಎಚ್‌ಒ ಮಾಹಿತಿ ನೀಡಿದರು.

ಕೋವಿಡ್ ಪರೀಕ್ಷಾ ಪ್ರಮಾಣ ಪತ್ರ ಹಾಜರುಪಡಿಸದವರಿಗೆ ಆರೋಗ್ಯ ಇಲಾಖೆಯಿಂದಲೇ ಕೋವಿಡ್‌ ಪರೀಕ್ಷೆ ನಡೆಸಿ ಪಾಸಿಟಿವ್ ಕಂಡುಬಂದರೆ 14 ದಿನ ಹೋಂ ಐಸೋಲೇಷನ್‌ನಲ್ಲಿರಿಸಲಾಗುವುದು. ಸಾರ್ವಜನಿಕರು ಕೋವಿಡ್‌ ಬಗ್ಗೆ ನಿರ್ಲಕ್ಷ್ಯ ತೋರದೆ ಮಾಸ್ಕ್‌, ಸ್ಯಾನಿಟೈಸರ್ ಬಳಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮಹಾರಾಷ್ಟ್ರ ಹಾಗೂ ಕೇರಳದಿಂದ ಬಂದವರ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಜ.16ರಿಂದ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಹಾಕಲಾಗುತ್ತಿದೆ. ಶೇ 85ರಷ್ಟು ಸರ್ಕಾರಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದರೆ, ಶೇ 68ರಷ್ಟು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಕನಿಷ್ಠ ಶೇ 90ರಷ್ಟು ಮಂದಿಗೆ ಕೋವಿಡ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಶೀಘ್ರ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದು. ಲಸಿಕೆ ಹಾಕಿಸಿಕೊಂಡರೆ ಅಡ್ಡಪರಿಣಾಮಗಳು ಇರುವುದಿಲ್ಲ. ಅಲರ್ಜಿ ಇರುವವರಿಗೆ ಮಾತ್ರ ತುರಿಕೆಯಂತಹ ಸಣ್ಣ ಸಮಸ್ಯೆಗಳು ಎದುರಾಗುತ್ತವೆ. ಭಯಪಡುವ ಅಗತ್ಯವಿಲ್ಲ ಎಂದು ಡಿಎಚ್‌ಒ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಶೇಷ ಕೋವಿಡ್‌ ಅಧಿಕಾರಿ ಡಾ.ಪ್ರೇಮಾನಂದ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.