ಗುರುವಾರ , ನವೆಂಬರ್ 21, 2019
22 °C
ಹೈಕೋರ್ಟ್‌ ನ್ಯಾಯಾಧೀಶರಾದ ಕೆ.ಎನ್‌.ಫಣೀಂದ್ರ ಸಲಹೆ

ಡಿಜಿಟಲ್ ಅಪರಾಧ: ಸಾಕ್ಷ್ಯ ಸಂಗ್ರಹ ಮುಖ್ಯ

Published:
Updated:
Prajavani

ಉಡುಪಿ: ವಿದ್ಯುನ್ಮಾನ ಸಾಕ್ಷ್ಯಗಳ ಕೊರತೆಯಿಂದ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತವೆ ಎಂದು ಹೈಕೋರ್ಟ್‌ ನ್ಯಾಯಾಧೀಶ ಕೆ.ಎನ್‌.ಫಣೀಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಜಿಲ್ಲಾ ನ್ಯಾಯಾಲಯ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಶನಿವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ವಿದ್ಯುನ್ಮಾನ ಸಾಕ್ಷ್ಯ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಐಟಿ ಕಾಯ್ದೆ ಜಾರಿಗೆ ಬಂದು 19 ವರ್ಷ ಕಳೆದರೂ ವಿದ್ಯುನ್ಮಾನ ಸಾಕ್ಷ್ಯಗಳ ಸಂಗ್ರಹದ ಬಗ್ಗೆ ಹೆಚ್ಚಿನ ಜ್ಞಾನ ಅಧಿಕಾರಿಗಳಲ್ಲಿಲ್ಲ. ಈಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಸಾಕ್ಷ್ಯಗಳ ಸಂಗ್ರಹಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಡಿಜಿಟಲ್ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಹೇಗೆ ಸಂಗ್ರಹಿಸಬೇಕು ಎಂಬ ಜ್ಞಾನದ ಕೊರತೆ ಅಧಿಕಾರಿಗಳಲ್ಲಿ ಇದೆ. ಡಿಜಿಟಲ್‌ ಅಪರಾಧಗಳ ಸ್ವರೂಪ ಹಾಗೂ ವಿದ್ಯುನ್ಮಾನ ಸಾಕ್ಷ್ಯಗಳ ಸಂಗ್ರಹ, ಅವುಗಳ ಕಾಪಿಡುವಿಕೆ ಬಗ್ಗೆ ತನಿಖಾಧಿಕಾರಿಗಳು, ವಕೀಲರು, ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಅರಿವಿರಬೇಕು. ಅದಕ್ಕಾಗಿ ನಾಲ್ಕು ಹಂತಗಳಲ್ಲಿ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ ಎಂದು ನ್ಯಾಯಾಧೀಶರಾದ ಫಣೀಂದ್ರ ಹೇಳಿದರು. 

ಡಿಜಿಟಲ್‌ ಅಪರಾಧಗಳು ಅಂದರೆ ಏನು, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸಿಕೊಂಡು ಹೇಗೆ ವಂಚನೆ ಮಾಡಲಾಗುತ್ತದೆ. ಪ್ರಕರಣಗಳ ತನಿಖೆ ನಡೆಸುವುದು ಹೇಗೆ, ನ್ಯಾಯಾಲಯಕ್ಕೆ ಅಗತ್ಯವಾಗಿ ಸಲ್ಲಿಸಬೇಕಾದ ಸಾಕ್ಷ್ಯಗಳು ಹಾಗೂ ದಾಖಲೆಗಳು ಯಾವುವು ಎಂಬ ಮಾಹಿತಿಯನ್ನು ತನಿಖಾಧಿಕಾರಿ ಕಡ್ಡಾಯವಾಗಿ ತಿಳಿದುಕೊಂಡಿರಬೇಕು ಎಂದು ಕಿವಿಮಾತು ಹೇಳಿದರು.

ತನಿಖಾಧಿಕಾರಿ ಒಪ್ಪಿಸಿದ ಡಿಜಿಟಲ್‌ ಸಾಕ್ಷ್ಯಗಳನ್ನು ಸಂರಕ್ಷಣೆ ಮಾಡುವುದು ಹೇಗೆ ಎಂಬುದನ್ನು ಸರ್ಕಾರಿ ಅಭಿಯೋಜಕರು ತಿಳಿದಿರಬೇಕು. ಕೆಲವೊಮ್ಮೆ ಪ್ರಕರಣಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿ, ದೀರ್ಘ ಅವಧಿಯವರೆಗೂ ಇತ್ಯರ್ಥವಾಗದಿರಬಹುದು. ಇಂತಹ ಸಂದರ್ಭಗಳಲ್ಲಿ ಸಾಕ್ಷ್ಯ ನಾಶವಾಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದರು.

ವಕೀಲರು ನ್ಯಾಯಾಲಯಕ್ಕೆ ಒದಗಿಸಿದ ಸಾಕ್ಷ್ಯಗಳನ್ನು ಕೋರ್ಟ್‌ನ ಸಿಬ್ಬಂದಿ ಜೋಪಾನವಾಗಿಡಬೇಕು. ಹಾಳಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ನ್ಯಾಯದಾನ ವ್ಯವಸ್ಥೆಯಲ್ಲಿ ನ್ಯಾಯಾಲಯ ಮಾತ್ರವಲ್ಲ, ಈ ವ್ಯವಸ್ಥೆಗೊಳಪಟ್ಟ ಎಲ್ಲ ಇಲಾಖೆಗಳು ಸರಿಯಾಗಿ ಕೆಲಸ ಮಾಡಬೇಕು. ಆಗಮಾತ್ರ, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹಿರಿಯ ಸದಸ್ಯ ಭೃಂಗೇಶ್, ಸೈಬರ್ ಸೆಕ್ಯುರಿಟಿ ತರಬೇತುದಾರ ಡಾ.ಅನಂತ ಪ್ರಭು, ಬೆಂಗಳೂರು ಸೈಬರ್ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ಯಶವಂತ ಕುಮಾರ್, ಉಡುಪಿ ವಕೀಲರ ಸಂಘಧ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ನ್ಯಾಯಾಧೀಶರಾದ ಸಿ.ಎಂ. ಜೋಷಿ ಸ್ವಾಗತಿಸಿದರು. ಎಸ್‌ಪಿ ನಿಶಾ ಜೇಮ್ಸ್ ವಂದಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಾವೇರಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)